Advertisement

ಸಿಎಂಗಳ ಜತೆ ಇಂದು ಪ್ರಧಾನಿ 5ನೇ ಸುತ್ತು ಸಭೆ

08:34 AM May 12, 2020 | Sriram |

ಹೊಸದಿಲ್ಲಿ: ಮೂರನೇ ಹಂತದ ಲಾಕ್‌ಡೌನ್‌ ಕೊನೆಯ ವಾರಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸೋಮವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ವೀಡಿಯೋ ಕಾನ್ಫರೆನ್ಸ್‌ ನಡೆಸಲಿದ್ದಾರೆ. ಮಾ. 24ರಂದು ಲಾಕ್‌ಡೌನ್‌ ಆರಂಭವಾದ ಬಳಿಕ ಸಿಎಂಗಳ ಜತೆ ಪ್ರಧಾನಿ ನಡೆಸುತ್ತಿರುವ ಐದನೇ ಸಮಾಲೋಚನೆ ಇದು.

Advertisement

ಮೇ 17ರ ಅನಂತರ ಲಾಕ್‌ಡೌನ್‌ ಸಂಪೂರ್ಣವಾಗಿ ತೆರವು ಮಾಡಬೇಕಾದರೆ ಕೈಗೊಳ್ಳಬೇಕಾದ ನಿರ್ಧಾರಗಳು ಮತ್ತು ಅಳವಡಿಸಿಕೊಳ್ಳಬೇಕಾದ ಮಾರ್ಗಸೂಚಿಗಳು ಅಥವಾ ಲಾಕ್‌ಡೌನ್‌ ಮುಂದುವರಿದರೆ ದೇಶದ ಆರ್ಥಿಕತೆಗೆ ಪೂರಕವಾಗಿ ಸಡಿಲಿಸಬೇಕಿರುವ ನಿರ್ಬಂಧ ಗಳು, ಕಂಟೈನ್‌ಮೆಂಟ್‌ ವಲಯಗಳ ನಿರ್ವಹಣೆ ಮತ್ತು ಕೆಂಪು ವಲಯಗಳಲ್ಲಿ ಕೈಗೊಳ್ಳಬೇಕಾದ ನಿರ್ಧಾರಗಳು, ವಲಸೆ ಕಾರ್ಮಿಕರ ಸುರಕ್ಷಿತ ಪ್ರಯಾಣ, ವಿದೇಶದಿಂದ ಕರೆತರಲಾಗುತ್ತಿರುವ ಭಾರತೀಯರ ವಿಚಾರಗಳು ಸೋಮ ವಾರದ ಸಭೆಯಲ್ಲಿ ಚರ್ಚೆಯಾಗಲಿವೆ ಎನ್ನಲಾಗಿದೆ.

ಎರಡು ಅಲಗಿನ ಕಾರ್ಯತಂತ್ರಕ್ಕೆ ಮೊರೆ
ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್‌ ಗೌಬಾ ಅವರು ಎಲ್ಲ ರಾಜ್ಯ ಸರಕಾರಗಳ ಪ್ರಧಾನ ಕಾರ್ಯದರ್ಶಿಗಳೊಂದಿಗೆ ರವಿವಾರ ಒಂದು ಸುತ್ತಿನ ಸಭೆ ನಡೆಸಿದ್ದಾರೆ. ಇದಲ್ಲದೆ ರಾಜ್ಯ ಸರಕಾರಗಳ ಹಿರಿಯ ಅಧಿಕಾರಿಗಳ ಜತೆಗೆ ಎರಡು ಬಾರಿ ಸಭೆ ನಡೆಸಲಾಗಿದ್ದು, ಈ ಸಂದರ್ಭ ಅವರೆಲ್ಲ ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸುವ ಬಗ್ಗೆ ಒಲವು ತೋರಿದ್ದಾರೆ ಎನ್ನಲಾಗಿದೆ. ಮೇ 17ರ ಅನಂತರ ಕೋವಿಡ್ -19 ನಿಯಂತ್ರಣ ಮತ್ತು ಆರ್ಥಿಕ ಪುನಶ್ಚೇತನ – ಈ ಎರಡೂ ವಿಚಾರಗಳನ್ನು ಸರಿದೂಗಿಸಿಕೊಂಡು ಹೋಗುವಂಥ ಕಾರ್ಯತಂತ್ರವನ್ನು ರೂಪಿಸುವ ಬಗ್ಗೆ ಹೆಚ್ಚಿನ ರಾಜ್ಯಗಳು ಒಲವು ತೋರಿವೆ ಎನ್ನಲಾಗಿದೆ.

ಕೆಂಪು ವಲಯ ನಿಖರ ಗುರುತಿಗೆ ಬೇಡಿಕೆ
ಕೆಂಪು ವಲಯಗಳನ್ನು ಕೇಂದ್ರ ಸರಕಾರವೇ ಗುರುತಿಸ ಬೇಕು. ಆ ವಲಯ ಬಿಟ್ಟು ಉಳಿದೆಡೆ ಆರ್ಥಿಕ ಚಟುವಟಿಕೆ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಡೆಸುವಂಥ ಮಾರ್ಗಸೂಚಿ ನೀಡಬೇಕು ಎಂಬ ನಿರ್ಧಾರಕ್ಕೆ ವಿವಿಧ ರಾಜ್ಯ ಸರಕಾರಗಳು ಬಂದಿವೆ ಎನ್ನಲಾಗಿದೆ. ಒಡಿಶಾದ ಬಿಜೆಡಿ ಸರಕಾರ ಈ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದು, ಈ ವಿಚಾರವೂ ಸೋಮವಾರದ ಪ್ರಧಾನಿ-ಸಿಎಂಗಳ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಬರಲಿದೆ ಎನ್ನಲಾಗಿದೆ. ಅಲ್ಲದೆ, ಸೋಂಕು ತೀವ್ರವಾಗಿರುವ ರಾಜ್ಯಗಳಿಗೆ ಕೇಂದ್ರ ತಂಡ ಕಳುಹಿಸುವ ಕುರಿತು ನಿರ್ಧಾರ ಹೊರಬೀಳಬಹುದು ಎನ್ನಲಾಗಿದೆ.

ಸಾಮಾಜಿಕ ನಿರ್ಬಂಧ ಮುಂದುವರಿಕೆ ?
ಜನದಟ್ಟಣೆಗೆ ಕಾರಣವಾಗುವಂಥ ಚಟುವಟಿಕೆಗಳಾದ ಸಿನೆಮಾ ಹಾಲ್‌, ಮಾಲ್‌ಗ‌ಳು, ಜಾತ್ರೆಗಳು, ಸಂಘ-ಸಂಸ್ಥೆಗಳ ಸಮಾರಂಭಗಳು, ಖಾಸಗಿ ಸಮಾರಂಭಗಳ ಮೇಲಿನ ನಿರ್ಬಂಧಗಳನ್ನು ಮುಂದುವರಿಸುವ ಬಗ್ಗೆ ಎಲ್ಲ ರಾಜ್ಯ ಸರಕಾರಗಳು ಒಲವು ತೋರಿವೆ. ರಮ್ಜಾನ್‌ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡುವುದಿಲ್ಲ ಎಂದು ತೆಲಂಗಾಣ ಸರಕಾರ ಈಗಾಗಲೇ ಪ್ರಕಟಿಸಿದೆ. ಇಂಥ ನಿರ್ಧಾರಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಗಬಹುದು ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next