Advertisement

ನಾಗರಿಕನ ಪತ್ರಕ್ಕೆ ಪಿಎಂಒ ಸ್ಪಂದನೆ

11:52 PM Jan 25, 2020 | mahesh |

ಕುಂದಾಪುರ: ಹತ್ತುವರ್ಷಗಳಿಂದ ಕುಂದಾಪುರದಲ್ಲಿ ಹೆದ್ದಾರಿ ಕಾಮಗಾರಿ, ಶಾಸ್ತ್ರಿ ಸರ್ಕಲ್‌ ಬಳಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದರೂ ನಿರೀಕ್ಷಿತ ವೇಗ ಪಡೆಯದೆ ಇರುವುದರಿಂದ ಸಾರ್ವಜನಿಕರಿಗೆ ಭಾರೀ ಸಮಸ್ಯೆಯಾಗುತ್ತಿದೆ ಎಂದು ಕುಂದಾಪುರದ ನಾಗರೀಕರೋರ್ವರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದು, ಆ ಪತ್ರಕ್ಕೆ ಶನಿವಾರ ಪ್ರಧಾನಿ ಕಚೇರಿಯಿಂದ ಸ್ಪಂದಿಸಿ ಉತ್ತರ ಬಂದಿದೆ.

Advertisement

ಕುಂದಾಪುರದ ಗಾಂಧಿ ಮೈದಾನದ ಎದುರಿನ ಬಿ.ವಿ.ಎಸ್‌. ರಸ್ತೆಯ ನಿವಾಸಿ ವಿಘ್ನೇಶ್‌ ಶೆಣೈ ಎನ್ನುವವರು ಕುಂದಾಪುರದ ಹೆದ್ದಾರಿ ಅವ್ಯವಸ್ಥೆ ಕುರಿತು ಪ್ರಧಾನಿಗೆ ಪತ್ರ ಬರೆದವರು.
ಉಡುಪಿಯ ಸಂತೆಕಟ್ಟೆಯಲ್ಲಿ ಉದ್ಯೋಗದಲ್ಲಿರುವ ವಿಘ್ನೇಶ್‌ ಅವರು ಡಿ. 24ರಂದು ಪ್ರಧಾನಿ ಕಚೇರಿಗೆ ತೊಂದರೆಗಳ ಬಗ್ಗೆ ವಿಸ್ತೃತವಾಗಿ ಬರೆದು ಪತ್ರ ಕಳುಹಿಸಿದ್ದರು. ಅದಕ್ಕೆ ಸ್ಪಂದಿಸಿದ ಪ್ರಧಾನಿ ಕಚೇರಿಯು, “ನಿಮ್ಮ ಪತ್ರ ತಲುಪಿದೆ. ನಿಮ್ಮ ಪತ್ರ ಮತ್ತು ಸಮಸ್ಯೆ ಕುರಿತಾಗಿ ಸಂಬಂಧಪಟ್ಟ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿಗೆ ಈಗಾಗಲೇ ಕಳುಹಿಸಲಾಗಿದೆ’ ಎನ್ನುವ ಉತ್ತರ ಕಳುಹಿಸಿದ್ದಾರೆ.

ಪತ್ರದಲ್ಲಿ ಏನಿತ್ತು?
ಕುಂದಾಪುರದಲ್ಲಿ 10 ವರ್ಷಗಳಿಂದ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಇಲ್ಲಿ ಸರ್ವಿಸ್‌ ರಸ್ತೆ ಮತ್ತು ಹೆದ್ದಾರಿ ಒಂದೇ ಆಗಿದೆ. ನಿತ್ಯ ಬೆಳಗ್ಗೆ ಮತ್ತು ಸಂಜೆ ವೇಳೆ ಟ್ರಾಫಿಕ್‌ ಜಾಮ್‌ಉಂಟಾಗುತ್ತಿದೆ. ಬೆಂಗಳೂರು ಮತ್ತಿತರೆಡೆಯಿಂದ ಬರುವ ಬಸ್‌ಗಳಿಗೆ ಸಮಸ್ಯೆಯಾಗುತ್ತಿದೆ. ಇದಲ್ಲದೆ ಸುರತ್ಕಲ್‌ನಿಂದ ಕುಂದಾಪುರದವರೆಗೆ ಹೆದ್ದಾರಿ 66ರ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಸಾಸ್ತಾನ, ಹೆಜಮಾಡಿಯಲ್ಲಿ ನಿರಂತರವಾಗಿ ಟೋಲ್‌ ಸಂಗ್ರಹ ಮಾಡುತ್ತಿದ್ದಾರೆ. ಕಾಮಗಾರಿ ಪೂರ್ಣಗೊಳ್ಳುವವರೆಗೆ ಟೋಲ್‌ ಸಂಗ್ರಹವನ್ನು ಸ್ಥಗಿತಗೊಳಿಸಿ ಎನ್ನುವುದಾಗಿ ಪತ್ರದಲ್ಲಿ ಪ್ರಧಾನಿ ಗಮನಕ್ಕೆ ತಂದಿದ್ದಾರೆ.

ಈ ಬಗ್ಗೆ ಸಂಬಂಧಪಟ್ಟ ಸಂಸದರು, ಸಚಿವರು, ಶಾಸಕರು, ಅಧಿಕಾರಿಗಳ ಸಹಿತ ಎಲ್ಲರ ಗಮನಕ್ಕೂ ತಂದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹಾಗಾಗಿ ಬೇರೆ ದಾರಿ ಕಾಣದೇ ಪ್ರಧಾನಿಗೆ ಪತ್ರ ಬರೆದಿದ್ದೆ.
– ವಿಘ್ನೇಶ್‌ ಶೆಣೈ, ಕುಂದಾಪುರ ಪ್ರಧಾನಿಗೆ ಪತ್ರ ಬರೆದವರು.

Advertisement

Udayavani is now on Telegram. Click here to join our channel and stay updated with the latest news.

Next