ಪ್ರಧಾನಮಂತ್ರಿಗಳ ಕಚೇರಿ ಎನ್ನುವುದು ಈಗ “ಪಬ್ಲಿಸಿಟಿ ಮಿನಿಸ್ಟರ್ಸ್ ಆಫೀಸ್’ ಎಂಬಂತಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಮಣಿಪುರ ರಾಜಧಾನಿ ಇಂಫಾಲ್‌ನಲ್ಲಿ ಬುಧವಾರ ಆಯೋಜಿಸಿದ್ದ ವಿದ್ಯಾರ್ಥಿಗಳ ಜತೆಗಿನ ಸಂವಾದ ಮತ್ತು ಸಾರ್ವಜನಿಕ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.
ಪ್ರಧಾನಿಯವರು ತಮಗೆ ಹೆಚ್ಚಿನ ಪ್ರಚಾರ ನೀಡುವ ಉದ್ದೇಶದಿಂದಲೇ ಕಚೇರಿಯನ್ನು ಬಳಕೆ ಮಾಡುತ್ತಿದ್ದಾರೆ ಎಂದರು. ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದ ಅವಧಿಯಲ್ಲಿ 2018ರಲ್ಲಿ ಪ್ರತಿದಿನ 30 ಸಾವಿರ ಉದ್ಯೋಗಗಳು ನಷ್ಟವಾಗುತ್ತಿದ್ದವು ಎಂದು ಟೀಕಿಸಿದ್ದಾರೆ. ದೇಶದ ಶಿಕ್ಷಣ ಸಂಸ್ಥೆಗಳನ್ನು ಕೇಸರೀಕರಣಗೊಳಿಸುವ ಎಲ್ಲಾ ಪ್ರಯತ್ನಗಳೂ ನಡೆಯುತ್ತಿವೆ ಎಂದಿದ್ದಾರೆ. ಸಂಸತ್‌ನಲ್ಲಿ ಬಿದ್ದು ಹೋಗಿರುವ ಪೌರತ್ವ (ತಿದ್ದುಪಡಿ) ವಿಧೇಯಕ 2018 ಈಶಾನ್ಯ ರಾಜ್ಯಗಳಿಗೆ ಮಾರಕ. ಕೇಂದ್ರ ಸರಕಾರದ ಪೂರ್ವದತ್ತ ನೋಟ ಎಂಬ ನಿಲುವೇ ಈಶಾನ್ಯ ರಾಜ್ಯಗಳ ಸಾಂಸ್ಕೃತಿಕ ವಿಚಾರ ಗಳಿಗೆ ಧಕ್ಕೆ ತರುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಟೀಕಿಸಿದ್ದಾರೆ.
ಮಾಹಿತಿಯೇ ಇಲ್ಲ: ನರೇಂದ್ರ ಮೋದಿಯವರ ಶಿಕ್ಷಣದ ಬಗ್ಗೆ ಪ್ರಸ್ತಾಪಿಸಿದ ಅವರು, ಪ್ರಧಾನಿಯವರು ವಿವಿಗೆ ತೆರಳಿ ಶಿಕ್ಷಣ ಪಡೆದಿದ್ದಾರೆಯೇ ಎಂಬ ವಿಚಾರ ಯಾರಿಗೂ ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ಬಗ್ಗೆ ಇದುವರೆಗೆ ಉತ್ತರವನ್ನೇ ನೀಡಲಾಗಿಲ್ಲ ಎಂದಿದ್ದಾರೆ. ಉದ್ಯೋಗ ನಷ್ಟ ವಿಚಾರಕ್ಕೆ ಟ್ವೀಟ್ ಮಾಡಿರುವ ಅವರು ಪ್ರತಿ ವರ್ಷ 1 ಕೋಟಿ ಉದ್ಯೋಗ ನಷ್ಟವಾಗಿದೆ. ಭಾರತದ ಪ್ರಧಾನಿ ಎಂಬ ವಿಚಾರ ನಗೆಪಾಟಲಿಗೀಡಾಗಿದೆ ಎಂದು ಬರೆದುಕೊಂಡಿದ್ದಾರೆ.