ಬೆಂಗಳೂರು: ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಉಲ್ಲಂ ಸಿ ಸಂಪಾದಿಸಿದ “ಕಳಂಕಿತ ಆಸ್ತಿ’ಗೆ ಸಂಬಂಧಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಆಸ್ತಿ ಪತ್ತೆಯಾದ ದಿನದಿಂದಲೇ ಕಾಯ್ದೆ ಅನ್ವಯವಾಗಲಿದೆ ಎಂದು ಹೇಳಿದೆ.
ತಮ್ಮ ಆಸ್ತಿ ಜಪ್ತಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ಹೊರಡಿಸಿದ್ದ ಆದೇಶ, ವಿಚಾರಣೆ ಹಾಜರಾಗಲು ಇ.ಡಿ. ವಿಶೇಷ ನ್ಯಾಯಾಲಯ ನೀಡಿದ ಸಮನ್ಸ್, ಪಿಎಂಎಲ್ ಕಾಯ್ದೆಯಡಿ ದಾಖಲಿಸಿದ ಪ್ರಕರಣ ಮತ್ತು ಆ ಕುರಿತು ಇ.ಡಿ. ನಡೆಸುತ್ತಿರುವ ವಿಚಾರಣೆಯನ್ನು ರದ್ದುಪಡಿಸಬೇಕು ಎಂದು ಮೈಸೂರು ನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ಅವ್ವಾ ಮಾದೇಶ ಸೇರಿ ಹಲವರು ಸಲ್ಲಿಸಿದ್ದ 30 ಪ್ರತ್ಯೇಕ ತಕರಾರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ| ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988ರ ಸೆಕ್ಷನ್ 13 (ಭ್ರಷ್ಟಚಾರದಿಂದ ಹಣ ಸಂಪಾದನೆ) ಅನ್ನು 2009 ಜೂ.1ರಿಂದ ಅನ್ವಯ ಆಗುವಂತೆ ಪಿಎಂಎಲ್ ಕಾಯ್ದೆಯ ಅಧಿಸೂಚಿತ ಅಪರಾಧ ಪಟ್ಟಿಗೆ (ಶೆಡ್ನೂಲ್) ಸೇರಿಸಲಾಗಿದೆ. ಹೀಗಾಗಿ, ಈ ದಿನಾಂಕಕ್ಕೂ ಮುನ್ನ ನಡೆದ ಭ್ರಷ್ಟಾಚಾರ ಪ್ರಕರಣಗಳಿಗೆ ಪಿಎಂಎಲ್ ಕಾಯ್ದೆ ಪೂರ್ವಾನ್ವಯ ಆಗುವುದಿಲ್ಲ. ತಮ್ಮ ವಿರುದ್ಧ 2009ರ ಜೂ.1ರ ಮುನ್ನ ದೂರು ದಾಖಲಿಸಲಾಗಿದ್ದು, ಇದೇ ಪ್ರಕರಣಗಳಿಗೆ ಸಂಬಂಧಿಸಿ ಆಸ್ತಿ ಜಪ್ತಿಗೆ ಆದೇಶಿಸಲಾಗಿದೆ. ಆದರೆ, ಪಿಎಂಎಲ್ ಕಾಯ್ದೆ ಪೂರ್ವಾನ್ವಯ ಆಗುವುದಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.
ಅದನ್ನು ಆಕ್ಷೇಪಿಸಿದ ಇ.ಡಿ. ಪರ ವಕೀಲರು, ಯಾರ ವಿರುದ್ಧ ಎಷ್ಟು ಮೊತ್ತಕ್ಕೆ ಹಣ ಅಕ್ರಮ ವರ್ಗಾವಣೆ ಆರೋಪ ಕೇಳಿಬರುತ್ತದೆಯೋ, ಅಷ್ಟು ಹಣ ಅಥವಾ ಅಷ್ಟು ಮೊತ್ತದ ಆಸ್ತಿಯನ್ನು ಜಪ್ತಿ ಮಾಡಲಾಗುತ್ತದೆ. 2009ರ ಜೂ.1ಕ್ಕಿಂತ ಮುಂಚಿನ ಪ್ರಕರಣಗಳಿಗೂ ಪಿಎಂಎಲ್ ಕಾಯ್ದೆ ಪೂರ್ವಾನ್ವಯವಾಗುತ್ತದೆ ಎಂದರು.
ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಅಪರಾಧ ಮೂಲದ ಹಣದ ಚಲನೆ ಗಂಭೀರ ವಿಚಾರ. ಇದು ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ. ಅಧಿಸೂಚಿತ ಅಪರಾಧವಿಲ್ಲದಿದ್ದರೂ ಪಿಎಂಎಲ್ ಕಾಯ್ದೆ ಬಳಸಬಹುದು. ಕಳಂಕಿತ ಆಸ್ತಿ ಜಪ್ತಿ ಮಾಡಲು ಕಾಯ್ದೆಯನ್ನು ಬಳಸಬಹುದು. ಕಾಯ್ದೆ ಪೂರ್ವಾನ್ವಯವಲ್ಲವೆಂದು ಅಪರಾಧ ಅಳಿಸಿ ಹೋಗುವುದಿಲ್ಲ ಎಂದು ಅಭಿಪ್ರಾಯಪಟ್ಟಿತು.