Advertisement

PM Vishwakarma Yojana : ಪಿಎಂ ವಿಶ್ವಕರ್ಮ ಯೋಜನೆ: ದೇಶಕ್ಕೆ ಜಿಲ್ಲೆ ಪ್ರಥಮ!

03:25 PM Feb 01, 2024 | Team Udayavani |

ಕೋಲಾರ:  ಕೇಂದ್ರ ಸರ್ಕಾರವು ಕುಶಲ ಕರ್ಮಿಗಳ ಶ್ರೇಯೋಭಿವೃದ್ಧಿಗಾಗಿ ಪ್ರಧಾನ ಮಂತ್ರಿಗಳ ವಿಶ್ವಕರ್ಮಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2023 ಸೆಪ್ಟೆಂಬರ್‌ 17ರಂದು ಜಾರಿಗೊಳಿಸಿದ್ದು, ಯೋಜನೆಯ ಪ್ರಗತಿಯಲ್ಲಿ ಕೋಲಾರ ಜಿಲ್ಲೆ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ.

Advertisement

ಭಾರತ ಸರ್ಕಾರವು ಪಿಎಂ-ವಿಶ್ವಕರ್ಮ ಹೊಸ ಯೋಜನೆಯನ್ನು, ಭಾರತ ಸರ್ಕಾರದ ಆರ್ಥಿಕ ಸೇವೆಗಳ ಇಲಾಖೆ, ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮಂತ್ರಾಲಯ ಹಾಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ  ಮಂತ್ರಾಲಯಗಳು  ಸಂಯೋಜಿತವಾಗಿ ಅನುಷ್ಠಾನಗೊಳಿಸಲಾಗುತ್ತಿದೆ.

ನೋಂದಣಿ ಹೇಗೆ?: ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌, ಆಧಾರ್‌ ಜೋಡಿತ ಮೊಬೈಲ್‌ ಸಂಖ್ಯೆ, ರೇಷನ್‌ ಕಾರ್ಡ್‌ ಹಾಗೂ ಕುಟುಂಬ ಸದಸ್ಯರ ಆಧಾರ್‌ ಕಾರ್ಡ್‌ ದಾಖಲೆಗಳೊಂದಿಗೆ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ನೋಂದಾಯಿಸಿಕೊಂಡು, ಈ ಯೋಜನೆಯಡಿ ನೋಂದಾಯಿತ ಕುಶಲಕರ್ಮಿಗಳಿಗೆ ಸವಲತ್ತು, ಸೌಲಭ್ಯ ಪಡೆಯಬಹುದಾಗಿದೆ.

ಯಾವ್ಯಾವ ಕುಶಲ ಕರ್ಮಿಗಳಿಗೆ ಅವಕಾಶ: ವಿಶ್ವ ಕರ್ಮ ಯೋಜನೆಯಡಿ 18 ಸಾಂಪ್ರದಾಯಿಕ ಕರಕುಶಲ ಕರ್ಮಿಗಳ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಬಡಗಿ, ಕಮ್ಮಾರಿಕೆ, ಕಲ್ಲು ಕೆಲಸ, ಬೀಗ ತಯಾರಕರು, ಅಕ್ಕಸಾಲಿಗ, ಕುಂಬಾರಿಕೆ, ಶಿಲ್ಪಿಗಳು, ಚಮ್ಮಾರಿಕೆ, ಶೂ ತಯಾರಿಕೆ, ಗಾರೆ ಕೆಲಸ, ಬಿದಿರು ಕೆಲಸ,ಪೊರಕೆ ತಯಾರಿಕೆ, ಚಾಪೆ ತಯಾರಿಕೆ, ತೆಂಗಿನ ನಾರಿನ ನೇಯ್ಗೆ, ಗೊಂಬೆ, ಆಟಿಕೆ ತಯಾರಕರು, ಕೌÒರಿಕರು, ಹೂಮಾಲೆ ತಯಾರಕರು, ದೋಬಿ, ದರ್ಜಿ, ಟೈಲರ್‌, ಮೀನಿನ ಬಲೆ ತಯಾರಕರು ಹಾಗೂ ದೋಣಿ ತಯಾರಕರು ಯೋಜನೆಯ ವ್ಯಾಪ್ತಿಗೆ ಬರುತ್ತಾರೆ.

ಮೊದಲ ಹಂತ: ಯೋಜನೆ ವ್ಯಾಪ್ತಿಯ ಕರಕುಶಲ ಕರ್ಮಿಗಳು ಮೊದಲ ಹಂತದಲ್ಲಿ ಯೋಜನೆಗೆ ನೋಂದಣಿ ಮಾಡಬೇಕಾಗುತ್ತದೆ. ಗ್ರಾಪಂ ಹಾಗೂ ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಅಗತ್ಯ ದಾಖಲಾತಿ ನೀಡಿ ನೋಂದಾಯಿಸಿಕೊಳ್ಳಬಹುದು.

Advertisement

ಎರಡನೇ ಹಂತ: ಈ ಹಂತದಲ್ಲಿ ನೋಂದಾಯಿತ ಕರಕುಶಲ ಕರ್ಮಿಗಳ ಪಟ್ಟಿಯನ್ನು ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕರು ಪರಿಶೀಲಿಸಿ ಜಿಲ್ಲಾಧಿಕಾರಿಗಳ ಮೂಲಕ ಅನುಮೋದಿಸುತ್ತಾರೆ.

ಮೂರನೇ ಹಂತ: ಮೂರನೇ ಹಂತದಲ್ಲಿ ಡೀಸಿಯಿಂದ ಅನುಮೋದಿಸಲ್ಪಟ್ಟ ಕರಕುಶಲ ಕರ್ಮಿಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಅಡಿಯ ಎಂಎಸ್‌ಎಂಇ ಮೂಲಕ ಪರಿಶೀಲಿಸಿಕೊಳ್ಳಲಾಗುವುದು. ನಂತರ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು.

ಕೋಲಾರ ಜಿಲ್ಲೆಯ ಪ್ರಗತಿ: ಕೋಲಾರ ಜಿಲ್ಲೆಯಲ್ಲಿ ಪಿಎಂ ವಿಶ್ವ ಕರ್ಮ ಯೋಜನೆಗೆ ವಿವಿಧ ಕರಕುಶಲ ಕರ್ಮಿಗಳ 78,065 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಹಂತದಲ್ಲಿ ಆರು ತಾಲೂಕುಗಳ ಕೋಲಾರ ಜಿಲ್ಲೆಯು 12ನೇ ಸ್ಥಾನದಲ್ಲಿದೆ. ವಿಶ್ವಕರ್ಮ ಯೋಜನೆಯ ಪ್ರಗತಿಯಲ್ಲಿ ಮೊದಲ, ಎರಡನೇ ಮತ್ತು ಮೂರನೇ ಹಂತಗಳನ್ನು ದಾಟಿ ತರಬೇತಿ ನೀಡುವ ಹಂತಕ್ಕೆ ಹೋಗಿರುವ ದೇಶದ ಏಕೈಕ ಜಿಲ್ಲೆ ಕೋಲಾರವಾಗಿದ್ದು, ತರಬೇತಿ ಪಡೆದವರಿಗೆ ಕೇಂದ್ರ ಸರ್ಕಾರವು ಟೂಲ್‌ ಕಿಟ್‌ ಮತ್ತು ಬ್ಯಾಂಕ್‌ ಸಾಲ ನೀಡಲು ಸಿದ್ಧತೆ ನಡೆಸುತ್ತಿದೆ.

240 ಫಲಾನುಭವಿಗಳಿಗೆ ತರಬೇತಿ :

78,065 ಫಲಾನುಭವಿಗಳ ಪೈಕಿ ಮೊದಲ ಹಂತಕ್ಕೆ ಶೇ.88 ಪ್ರಮಾಣದಲ್ಲಿ 67,194 ಮಂದಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಎರಡನೇ ಹಂತಕ್ಕೆ 67,194 ಮಂದಿ ಪೈಕಿ 64,923 ಮಂದಿಯನ್ನು ಶೇ.96 ಪ್ರಮಾಣದಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ. ಮೂರನೇ ಹಂತಕ್ಕೆ 14 ಸಾವಿರ ಮಂದಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿಕೊಂಡು ವಿವಿಧ ಹಂತಗಳ ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಹೀಗೆ ತರಬೇತಿಗೆ ಆಯ್ಕೆಯಾದ 14 ಸಾವಿರ ಮಂದಿ ಪೈಕಿ 240 ಮಂದಿ ಈಗಾಗಲೇ ತರಬೇತಿ ಪಡೆದುಕೊಳ್ಳುತ್ತಿದ್ದಾರೆ.

ಮೂರು ಲಕ್ಷ ರೂಪಾಯಿ ಸಾಲ ಸೌಲಭ್ಯ :

ಅಂತಿಮಗೊಂಡ ಕರಕುಶಲ ಕರ್ಮಿಗಳಿಗೆ ಒಂದು ವಾರ ಕಾಲ ತರಬೇತಿ ನೀಡಲಾಗುವುದು. ಈ ಹಂತದಲ್ಲಿ ಫಲಾನುಭವಿಗಳಿಗೆ ತರಬೇತಿ ಅವಧಿಯಲ್ಲಿ  500 ರೂ.ಗಳ ಶಿಷ್ಯವೇತನ ನೀಡಲಾಗುವುದು. ತರಬೇತಿಯ ನಂತರ ಆಯಾ ಕರಕುಶಲ ಕರ್ಮಿಗಳಿಗೆ ಉಪಯೋಗವಾಗುವ ರೀತಿಯ ಉಪಕರಣ ಕಿಟ್‌ ವಿತರಿಸಲಾಗುವುದು. ಆನಂತರ ಮೊದಲ ಹಂತದಲ್ಲಿ 1 ಲಕ್ಷ ರೂ. ಬ್ಯಾಂಕ್‌ ಸಾಲವನ್ನು  ಶೇ.5ರಷ್ಟು ಬಡ್ಡಿ ದರದಲ್ಲಿ ನೀಡಲಾಗುವುದು. ಈ ಸಾಲವನ್ನು ಫಲಾನುಭವಿಗಳು ಕರಕೌಶಲ್ಯ ಅಭಿವೃದ್ಧಿಗೆ ಸದ್ಬಳಕೆ ಮಾಡಿಕೊಂಡು 18 ತಿಂಗಳೊಳಗಾಗಿ ಮರು ಪಾವತಿಸಿದರೆ ಮತ್ತೇ ಒಂದು ಲಕ್ಷದ ಜತೆಗೆ ಎರಡು ಲಕ್ಷ ಸೇರಿಸಿ ಒಟ್ಟು ಮೂರು ಲಕ್ಷ ರೂ. ಸಾಲ ಸೌಲಭ್ಯ ನೀಡಲಾಗುವುದು.

ಪಿಎಂ ವಿಶ್ವಕರ್ಮಯೋಜನೆಯ ಪ್ರಗತಿಯಲ್ಲಿ ಜಿಲ್ಲೆ ದೇಶದಲ್ಲೇ ಮೊದಲ ಸ್ಥಾನದಲ್ಲಿರುವುದಕ್ಕೆ ಡೀಸಿ ನಿರಂತರ ಸಭೆ ನಡೆಸುವ ಮೂಲಕ ಗ್ರಾಪಂ ಮತ್ತು ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರನ್ನು ಹೆಚ್ಚು ನೋಂದಣಿ ಮಾಡಿಸುವಲ್ಲಿ ಯಶಸ್ವಿಯಾದರು. ಆನಂತರ ಇ-ಶ್ರಮ ಡಾಟಾ ಬಳಸಿಕೊಂಡು ಎಲ್ಲರಿಗೂ ವಿಶ್ವಕರ್ಮ ನೋಂದಣಿಗೆ ಮೊಬೈಲ್‌ ಸಂದೇಶ ಕಳುಹಿಸಲಾಯಿತು. ಗ್ರಾಪಂ ಸ್ವಚ್ಛತಾ ವಾಹನದಲ್ಲಿ ಮೈಕ್‌ ಪ್ರಚಾರ ಮಾಡಲಾಯಿತು. ಹೀಗಾಗಿ ಯೋಜನೆ ಯಶಸ್ವಿಯಾಗಿದೆ.-ಪಿ.ನಾಗೇಶ್‌, ಜಂಟಿ ನಿರ್ದೇಶಕ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೋಲಾರ

– ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next