ನವದೆಹಲಿ:ನೂತನ ಕೃಷಿ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಕಳೆದ 20ದಿನಗಳಿಂದ ದೆಹಲಿ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನೇತೃತ್ವದ ಸರ್ಕಾರದ ಕೃಷಿ ಕಾಯ್ದೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ನೂತನ ಕೃಷಿ ಕಾಯ್ದೆಯನ್ನು ರದ್ದುಪಡಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಕಾಯ್ದೆ ರದ್ದಾಗಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದ್ದರಿಂದ ಸಂಧಾನ ವಿಫಲವಾಗಿದ್ದು, ಪ್ರತಿಭಟನೆಗೆ ಕಾರಣವಾಗಿದೆ ಎಂದು ಹೇಳಿದರು.
ಹಲವಾರು ವರ್ಷಗಳಿಂದ ವಿರೋಧ ಪಕ್ಷಗಳು ಮತ್ತು ರೈತ ಸಂಘಟನೆಗಳು ಏನು ಬೇಕೆಂದು ಬೇಡಿಕೆ ಇಟ್ಟಿದ್ದಾರೋ ಅದೇ ರೀತಿ ಕೃಷಿ ನೀತಿಯನ್ನು ಬದಲಾವಣೆ ಮಾಡಲಾಗಿದೆ ಎಂದು ಪ್ರಧಾನಿ ತಿಳಿಸಿದ್ದು, ಆದರೆ ಇದೀಗ ವಿರೋಧ ಪಕ್ಷಗಳು ರೈತರ ದಿಕ್ಕು ತಪ್ಪಿಸುತ್ತಿವೆ ಎಂದು ಆರೋಪಿಸಿದರು.
ರೈತರ ಏಳಿಗೆಗಾಗಿ ಭಾರತ ಸರ್ಕಾರ ಸದಾ ಬದ್ಧವಾಗಿದೆ. ರೈತರ ಬಗ್ಗೆ ನಮಗೆ ಕಾಳಜಿ ಇದೆ, ಅವರ ಸಮಸ್ಯೆಗಳನ್ನು ಪರಿಹರಿಸುವುದಾಗಿ ಪ್ರಧಾನಿ ಮೋದಿ ಅವರು ಗುಜರಾತ್ ಕಛ್ ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡುತ್ತ ಈ ವಿಷಯ ಪ್ರಸ್ತಾಪಿಸಿದರು.
ಇದನ್ನೂ ಓದಿ:ಪರಿಷತ್ ಗಲಾಟೆ ಪ್ರಕರಣ: ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ- ಜೆಡಿಎಸ್ ನಿಯೋಗ
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ “ಮನ್ ಕಿ ಬಾತ್” ನಲ್ಲಿ ರೈತರು ದೆಹಲಿ ಚಲೋ ಪ್ರತಿಭಟನೆ ಆರಂಭಿಸಿದ ಮೂರನೇ ದಿನದ ನಂತರ ನೂತನ ಕೃಷಿ ಕಾಯ್ದೆಯನ್ನು ಬೆಂಬಲಿಸುವುದಾಗಿ ಹೇಳುವ ಮೂಲಕ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.