ಕೌಶಾಂಬಿ, ಉತ್ತರ ಪ್ರದೇಶ : 1954ರಲ್ಲಿ ಜವಾಹರ್‌ಲಾಲ್ ನೆಹರೂ ಪ್ರಧಾನಿಯಾಗಿದ್ದಾಗ ಅಲಹಾಬಾದ್ ನ ಕುಂಭ ಮೇಳದಲ್ಲಿ ಸಾವಿರಾರು ಜನರು ಕಾಲ್ ತುಳಿತಕ್ಕೆ ಬಲಿಯಾಗಿದ್ದರು. ಆದರೆ ಈ ವರ್ಷ ಉತ್ತರ ಪ್ರದೇಶದ, ಯೋಗಿ ಆದಿತ್ಯನಾಥ್ ಅವರ ಬಿಜೆಪಿ ಸರಕಾರ ಸಾವು, ನೋವು, ಭ್ರಷ್ಟಾಚಾರ ಮುಂತಾಗಿ ಯಾವುದೇ ಕಳಂಕ ಇಲ್ಲದ ರೀತಿಯಲ್ಲಿ, ಕುಂಭ ಮೇಳವನ್ನು ಅತ್ಯಂತ ವ್ಯವಸ್ಥಿತವಾಗಿ, ನಡೆಸಿಕೊಟ್ಟು ಸರ್ವತ್ರ ಪ್ರಶಂಸೆಗೆ ಪಾತ್ರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇಂದಿಲ್ಲಿ ನಡೆದ ಚುನಾವಣಾ ಪ್ರಚಾರ ರಾಲಿಯಲ್ಲಿ ಮಾತನಾಡುತ್ತಿದ್ದ ಅವರು, “1954ರ ಕುಂಭ ಮೇಳದಲ್ಲಿ ಸಾವಿರಾರು ಜನರು ಕಾಲ್ ತುಳಿತಕ್ಕೆ ಬಲಿಯಾಗಿದ್ದರೂ ಸರಕಾರದ ಒತ್ತಡದಿಂದಾಗಿ ಮಾಧ್ಯಮಗಳು ಸತ್ಯವನ್ನು ಮುಚ್ಚಿಟ್ಟು ಕೆಲವೇ ನೂರು ಜನರು ಮೃತಪಟ್ಟಿದ್ದುದಾಗಿ ವರದಿ ಮಾಡಿದ್ದವು. ಆಗ ದೇಶದಲ್ಲಿ ಕೇಂದ್ರ, ರಾಜ್ಯದಿಂದ ಹಿಡಿದು ಪಂಚಾಯತ್ ವರೆಗೂ ಕಾಂಗ್ರೆಸ್ ಸರಕಾರವೇ ಇತ್ತು. ಇಂದಿನ ಎಷ್ಟೋ ರಾಜಕೀಯ ಪಕ್ಷಗಳು ಆಗ ಹುಟ್ಟಿಯೇ ಇರಲಿಲ್ಲ. ಅಂದು ಕುಂಭ ಮೇಳದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಕೇಂದ್ರ, ರಾಜ್ಯ ಸರಕಾರ ಒಂದು ನಯಾಪೈಸೆಯ ಪರಿಹಾರವನ್ನೂ ಕೊಟ್ಟಿರಲಿಲ್ಲ. ಆ ರೀತಿಯ ಸಂವೇದನಾ ರಾಹಿತ್ಯತೆ ಸರಕಾರದಲ್ಲಿತ್ತು. ದೇಶದ ಮೊತ್ತ ಮೊದಲ ಪ್ರಧಾನಿ ಅಂತಹ ಪಾಪ ಮಾಡಿದ್ದರು’ ಎಂದು ಮೋದಿ ಹೇಳಿದರು.
ಉತ್ತರ ಪ್ರದೇಶದ ಬಿಜೆಪಿ ಸರಕಾರ ಈ ಬಾರಿಯ ಕುಂಭ ಮೇಳವನ್ನು ಅತ್ಯಂತ ಶಿಸ್ತು, ಸುವ್ಯವಸ್ಥೆ, ನೈರ್ಮಲ್ಯದೊಂದಿಗೆ ನಡೆಸಿಕೊಟ್ಟು ವಿಶ್ವ ಪ್ರಶಂಸೆಗೆ ಪಾತ್ರವಾಗಿರುವುದು ಪಕ್ಷಕ್ಕೆ ಹೆಗ್ಗಳಿಕೆಯ ಸಾಧನೆಯಾಗಿದೆ ಎಂದು ಮೋದಿ ಹೇಳಿದರು.
ಹಿಂದೆಲ್ಲ ಕುಂಭ ಮೇಳಗಳು ನಡೆದಾಗ ಸಚಿವರು, ಅಧಿಕಾರಿಗಳು, ಗುತ್ತಿಗೆದಾರರು ಮುಂತಾಗಿ ಎಲ್ಲರಿಂದಲೂ ವ್ಯಾಪಕ ಭ್ರಷ್ಟಾಚಾರ ನಡೆದ ಆರೋಪಗಳು ಕೇಳಿ ಬರುತ್ತಿದ್ದವು; ಆದರೆ ಈ ಬಾರಿ ಬಿಜೆಪಿ ನಡೆಸಿಕೊಟ್ಟ ಕುಂಭ ಮೇಳದಲ್ಲಿ ಅಂತಹ ಯಾವುದೇ ಆರೋಪಗಳು ಕೇಳಿ ಬಂದಿಲ್ಲ ಎಂದು ಮೋದಿ ಹೇಳಿದರು.
ಎಸ್‌ಪಿ, ಬಿಎಸ್‌ಪಿ, ಆರ್‌ಎಲ್‌ಡಿ ನಡುವಿನ ಘಟಬಂಧನವನ್ನು ಟೀಕಿಸಿದ ಪ್ರಧಾನಿ ಮೋದಿ, ಹಾವು ಮುಂಗುಸಿಯಂತಿದ್ದ ಎಸ್‌ಪಿ – ಬಿಎಸ್‌ಪಿ ಈಗ ತಮ್ಮ ಸ್ವಾರ್ಥ ಸಾಧನೆಗಾಗಿ ಪರಸ್ಪರ ಕೈಜೋಡಿಸಿವೆ ಎಂದು ಹೇಳಿದರು.