Advertisement
ಅದರ ಭಾಗವಾಗಿ ಮುಂದಿನ ಒಂದು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ಎರಡು ತಿಂಗಳಿಗೊಮ್ಮೆ ರಾಜ್ಯಕ್ಕೆ ಭೇಟಿ ನೀಡುವುದು, ಕೇಂದ್ರ ಸಚಿವರು ಮತ್ತು ಬಿಜೆಪಿಯ ರಾಷ್ಟ್ರೀಯ ನಾಯಕರು ಪ್ರತಿ ತಿಂಗಳು ಕನಿಷ್ಠ ಒಬ್ಬರಂತೆ ರಾಜ್ಯಕ್ಕೆ ಆಗಮಿಸಿ ಪರೋಕ್ಷವಾಗಿ ಚುನಾವಣ ಪ್ರಚಾರ ಕೈಗೊಳ್ಳಲು ಕಾರ್ಯತಂತ್ರ ರೂಪಿಸಲಾಗಿದೆ ಎನ್ನಲಾಗಿದೆ.
Related Articles
Advertisement
ಪ್ರತಿ ತಿಂಗಳಿಗೆ ಒಬ್ಬರು ಕೇಂದ್ರ ಸಚಿವರು ಅಥವಾ ಪಕ್ಷದ ರಾಷ್ಟ್ರೀಯ ನಾಯಕರು ಭೇಟಿ ನೀಡುವಂತೆ ಕಾರ್ಯಕ್ರಮಗಳನ್ನು ರೂಪಿಸಲೂ ಬಿಜೆಪಿ ನಿರ್ಧರಿಸಿದೆ. ಕೇಂದ್ರ ಸಚಿವರು ಆಗಮಿಸಿದರೆ ತಮ್ಮ ಇಲಾಖೆಗಳ ಯೋಜನೆಗಳ ಕುರಿತು ಸಾರ್ವಜನಿಕ ಸಮಾರಂಭಗಳನ್ನು ಏರ್ಪಡಿಸಿ ಅವರಿಂದ ಪರೋಕ್ಷವಾಗಿ ಚುನಾವಣ ಪ್ರಚಾರ ನಡೆಸುವುದು. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಸಹಿತ ಹಿರಿಯ ನಾಯಕರು ಆಗಮಿಸಿದರೆ ಪಕ್ಷ ಸಂಘಟನೆ, ಕಾರ್ಯಕರ್ತರೊಂದಿಗೆ ಸಂವಾದ, ಚುನಾವಣ ಕಾರ್ಯತಂತ್ರ ರೂಪಿಸುವುದು ಸಹಿತ ಚುನಾವಣೆಗೆ ಪೂರಕವಾದ ಸಿದ್ಧತೆಗಳನ್ನು ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ.
ಕೋರ್ ಕಮಿಟಿಯಲ್ಲಿ ನಿರ್ಧಾರ :
ಪ್ರಸ್ತುತ ಗುಜರಾತ್ ಜತೆಗೆ ಕರ್ನಾಟಕವನ್ನೂ ಗೆಲ್ಲಲು ಗುರಿ ಇಟ್ಟುಕೊಂಡಿರುವ ಬಿಜೆಪಿ, ಎರಡು ತಿಂಗಳ ಹಿಂದೆ ನಡೆದ ಕೋರ್ ಕಮಿಟಿ ಸಭೆಯಲ್ಲೂ ವಿಶೇಷ ಕಾರ್ಯಕ್ರಮ ನಡೆಸುವ ಬಗ್ಗೆ ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ಅದರ ಮೊದಲ ಭಾಗವಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಎರಡು ದಿನಗಳ ಹಿಂದೆ ರಾಜ್ಯಕ್ಕೆ ಆಗಮಿಸಿದ್ದರು. ಅವರು ಒಬಿಸಿ ಘಟಕದ ರಾಷ್ಟ್ರೀಯ ಕಾರ್ಯಕಾರಿಣಿ ಹಾಗೂ ಚಿತ್ರದುರ್ಗದಲ್ಲಿ ಪಂಚಾಯತ್ ಸದಸ್ಯರ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ಹಾಗೂ ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದೂ ಅದರ ಒಂದು ಭಾಗ ಎನ್ನಲಾಗುತ್ತಿದೆ.
ಬೇಕಿದೆ ಮೋದಿ ಬಲ :
ರಾಜ್ಯದಲ್ಲಿ ಮುಂದಿನ ಬಾರಿಯೂ ಅಧಿಕಾರಕ್ಕೆ ಬರುವುದು ಅಷ್ಟೊಂದು ಸುಲಭವಲ್ಲ ಎನ್ನುವುದು ಪಕ್ಷದ ಆಂತರಿಕ ಸಮೀಕ್ಷೆಗಳಿಂದ ತಿಳಿದು ಬಂದಿದೆ ಎನ್ನಲಾಗಿದ್ದು, ಪಕ್ಷವನ್ನು ಅಧಿಕಾರಕ್ಕೆ ತರಲು ನರೇಂದ್ರ ಮೋದಿ ಅವರ ಪ್ರಭಾವ ಅತ್ಯಂತ ಮುಖ್ಯವಾಗಿದೆ. ಅದೇ ಕಾರಣಕ್ಕೆ ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಪ್ರಧಾನಿಯನ್ನು ಕರೆಸಿ ರಾಜಕೀಯ ಭಾಷಣ ಮಾಡಿಸುವ ಬದಲು ಈಗಿನಿಂದಲೇ ಕೇಂದ್ರದ ಯೋಜನೆಗಳು ಹಾಗೂ ಕೇಂದ್ರದ ಸಾಧನೆಗಳನ್ನು ಪ್ರಧಾನಿ ಮೂಲಕವೇ ಜನರಿಗೆ ತಿಳಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
-ಶಂಕರ ಪಾಗೋಜಿ