ಮುಂಬೈ: ಉದ್ಧವ್ ಠಾಕ್ರೆ ಬಣದ ಶಿವಸೇನೆ ನಾಯಕ ಸಂಜಯ್ ರಾವತ್ ಅವರು 2024ರ ಚುನಾವಣೆಯಲ್ಲಿ ವಾರಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋಲನುಭವಿಸುತ್ತಾರೆ ಎಂದಿದ್ದಾರೆ. ಒಂದು ವೇಳೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ವಾರಣಸಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಮೋದಿಗೆ ಸೋಲು ಖಚಿತ ಎಂದು ಹೇಳಿದ್ದಾರೆ.
“ವಾರಣಸಿ ಜನರು ಪ್ರಿಯಾಂಕಾ ಗಾಂಧಿ ಅವರನ್ನು ಬಯಸುತ್ತಿದ್ದಾರೆ. ಒಂದು ವೇಳೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ವಾರಣಸಿಯಲ್ಲಿ ಮೋದಿ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದರೆ, ಪ್ರಿಯಾಂಕಾ ಗೆಲುವು ಕಾಣಲಿದ್ದಾರೆ. ರಾಯ್ ಬರೇಲಿ, ವಾರಣಸಿ ಮತ್ತು ಅಮೇಥಿಯಲ್ಲಿ ಬಿಜೆಪಿ ಗೆಲುವು ಕಷ್ಟವಿದೆ” ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಶರದ್ ಪವಾರ್ ಮತ್ತು ಅಜಿತ್ ಪವಾರ್ ಭೇಟಿಯ ಬಗ್ಗೆ ಮಾತನಾಡಿದ, “ಪಾಕಿಸ್ತಾನದ ಪಿಎಂ ನವಾಜ್ ಶರೀಫ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗುವುದಾದರೆ, ಶರದ್ ಮತ್ತು ಅಜಿತ್ ಪವಾರ್ ಭೇಟಿಯಲ್ಲಿ ತಪ್ಪೇನಿದೆ” ಎಂದರು.
ಇದನ್ನೂ ಓದಿ:Special Story: ವಿಶ್ವಕಪ್ ಸಂಭ್ರಮದ ನಡುವೆ ಗಡಿಯಲ್ಲಿ ಯೋಧನ ಒದ್ದಾಟ !
‘’ಶರದ್ ಪವಾರ್ ಮತ್ತು ಅಜಿತ್ ಪವಾರ್ ಭೇಟಿಯಾಗಿದ್ದಾರೆ ಎಂದು ಮಾಧ್ಯಮಗಳಿಂದ ನಮಗೆ ತಿಳಿದಿದೆ, ಶರದ್ ಪವಾರ್ ಶೀಘ್ರದಲ್ಲೇ ಈ ಬಗ್ಗೆ ಮಾತನಾಡುತ್ತಾರೆ. ಬಹುಶಃ ಶರದ್ ಪವಾರ್ ಅವರು ಅಜಿತ್ ಪವಾರ್ ಅವರನ್ನು ಇಂಡಿಯಾ ಕೂಟ ಸಭೆಗೆ ಆಹ್ವಾನಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ” ಎಂದರು.
ಮಹಾರಾಷ್ಟ್ರದ ಇಬ್ಬರೂ ಉಪ ಮುಖ್ಯಮಂತ್ರಿಗಳು ಸಹ ಈ ಪ್ರಸ್ತುತ ಸರ್ಕಾರದ ಬಗ್ಗೆ ಸಂತೋಷವಾಗಿಲ್ಲ ಎಂದು ರಾವತ್ ಹೇಳಿದರು. “ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಅಜಿತ್ ಪವಾರ್, ದೇವೆಂದ್ರ ಫಡ್ನವೀಸ್ ಮತ್ತು ಮಹಾರಾಷ್ಟ್ರದ ಜನತೆ ಈ ಸರ್ಕಾರದಿಂದ ಸಂತುಷ್ಟವಾಗಿಲ್ಲ’ ಎಂದರು.