Advertisement

ಪಂಚ ನದಿ ಯೋಜನೆಗೆ ಮೋದಿ ಚಾಲನೆ; 45 ವರ್ಷಗಳ ಬಳಿಕ ಪಶ್ಚಿಮ ಉ.ಪ್ರ.ದ ಪ್ರಮುಖ ಯೋಜನೆಗೆ ಚಾಲನೆ

09:00 PM Dec 11, 2021 | Team Udayavani |

ಬಲರಾಮಪುರ (ಉ.ಪ್ರ): ಪಶ್ಚಿಮ ಉತ್ತರ ಪ್ರದೇಶದ ಒಂಭತ್ತು ಜಿಲ್ಲೆಗಳ 14 ಲಕ್ಷ ಪ್ರದೇಶಗಳಿಗೆ ನೀರಾವರಿ ಒದಗಿಸುವ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದ್ದಾರೆ. ಘಾಘ್ರಾ, ಸರಯೂ, ರಫ್ತಿ, ಬಂಗಾಂಗಾ, ರೋಹಿಣಿ ಎಂಬ ಐದು ನದಿಗಳನ್ನು ಜೋಡಿಸಿ ನಿರ್ಮಿಸಲಾಗಿರುವ ಸರಯೂ ರಾಷ್ಟ್ರೀಯ ಕಾಲುವೆ ಯೋಜನೆ ಇದಾಗಿದೆ.

Advertisement

ಬಲರಾಮಪುರದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ರೈತರು ಸಹಜ ಕೃಷಿ ನಡೆಸುವತ್ತ ಗಮನ ಹರಿಸಬೇಕು. ಇದರಿಂದಾಗಿ ನೀರಿನ ಬಳಕೆಯ ಪ್ರಮಾಣ ಕಡಿಮೆ ಮಾಡಬಹುದು ಮತ್ತು ಹೆಚ್ಚಿನ ಬೆಳೆ ತೆಗೆಯಲು ಅನುಕೂಲವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಈ ಯೋಜನೆಯಿಂದಾಗಿ 14 ಲಕ್ಷ ಹೆಕ್ಟೇರ್‌ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಸಿಗಲಿದೆ ಎಂದು ಹೇಳಿದ್ದಾರೆ.

ಡಿ.16ರಂದು ಸಹಜ ಕೃಷಿ ಬಗ್ಗೆ ಆಯೋಜಿಸಲಾಗಿರುವ ಕಾರ್ಯಕ್ರಮವನ್ನು ರೈತರೆಲ್ಲರೂ ಕೃಷಿ ವಿಜ್ಞಾನ ಕೇಂದ್ರ ಅಥವಾ ಟಿವಿ ವಾಹಿನಿಗಳ ಮೂಲಕ ವೀಕ್ಷಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಮುಂದಿನ ವರ್ಷದ ಮೊದಲ ಭಾಗದಲ್ಲಿ ನಡೆಯವಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿಯವರ ಬಲರಾಮಪುರ ಭೇಟಿ ಮತ್ತು ಬಹುಕೋಟಿ ವೆಚ್ಚದ ಯೋಜನೆ ಲೋಕಾರ್ಪಣೆ ಮಹತ್ವ ಪಡೆದಿದೆ.

ಇದನ್ನೂ ಓದಿ:ಯಾವುದೇ ಕ್ರೀಡೆಯಲ್ಲಿ ಆಡುವಾಗ ಗೆಲ್ಲಲೆಂದೇ ಆಡಬೇಕು : ಮುಖ್ಯಮಂತ್ರಿ ಬೊಮ್ಮಾಯಿ

1976ರಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳುವ ಸಂದರ್ಭದಲ್ಲಿ ಅದರ ವೆಚ್ಚ 100 ಕೋಟಿ ರೂ.ಗಳಿಗಿಂತ ಕಡಿಮೆಯಾಗಿತ್ತು. ರಾಜಕೀಯ ಇಚ್ಛಾಶಕ್ತಿಯಿಂದ ಅನುಷ್ಠಾನಕ್ಕೆ ಹಿನ್ನಡೆಯಾಗಿದ್ದರಿಂದ 10 ಸಾವಿರ ಕೋಟಿ ರೂ. ವೆಚ್ಚ ಮಾಡುವಂಥ ಪರಿಸ್ಥಿತಿ ಬಂದೊದಗಿದೆ ಎಂದು ಪ್ರಧಾನಿ ಮೋದಿ ವಿಷಾದಿಸಿದ್ದಾರೆ.

Advertisement

ಯೋಜನೆಯ ಪಕ್ಷಿ ನೋಟ
14 ಲಕ್ಷ ಹೆಕ್ಟೇರ್‌- ಇಷ್ಟು ಪ್ರದೇಶಗಳಿಗೆ ನೀರಾವರಿ
29 ಲಕ್ಷ- ರೈತರಿಗೆ ಲಾಭ
09- ಇಷ್ಟು ಜಿಲ್ಲೆಗಳಿಗೆ ಲಾಭ- ಪೂರ್ವ ಉತ್ತರ ಪ್ರದೇಶದ ಬಹರ್ಚಿಯಾ, ಶ್ರಾವಸ್ತಿ, ಬಲರಾಮಪುರ, ಗೊಂಡಾ, ಸಿದ್ಧಾರ್ಥನಗರ, ಬಸ್ತಿ, ಸಂತ ಕಬೀರ್‌ನಗರ್‌, ಗೋರಖ್‌ಪುರ, ಮಹಾರಾಜ್‌ಗಂಜ್‌.
6, 200- ಇಷ್ಟು ಗ್ರಾಮಗಳ ವ್ಯಾಪ್ತಿ
1978- ಯೋಜನೆ ಸ್ಥಾಪನೆ ಮಾಡುವ ಬಗ್ಗೆ ಯೋಜಿಸಿದ್ದ ವರ್ಷ
2016- ಪ್ರಧಾನಮಂತ್ರಿ ಕೃಷಿ ಸಿಂಚಯೀ ಯೋಜನೆ ವ್ಯಾಪ್ತಿಗೆ ಸೇರ್ಪಡೆ
05- ಇಷ್ಟು ನದಿಗಳ ಜೋಡಣೆ -ಘಾಘ್ರಾ, ಸರಯೂ, ರಪ್ತಿ, ಬಂಗಾಂಗ, ರೋಹಿಣಿ
78.68 ಕೋಟಿ ರೂ.- ಆರಂಭದಲ್ಲಿ ಮೀಸಲಾಗಿ ಇರಿಸಿದ್ದ ಮೊತ್ತ
9,802 ಕೋಟಿ ರೂ.- ಯೋಜನೆಯ ಒಟ್ಟು ವೆಚ್ಚ
4,600 ಕೋಟಿ ರೂ.- ನಾಲ್ಕು ವರ್ಷಗಳ ಅವಧಿಯಲ್ಲಿ ಮಾಡಲಾಗಿರುವ ವೆಚ್ಚ

Advertisement

Udayavani is now on Telegram. Click here to join our channel and stay updated with the latest news.

Next