Advertisement

ರಾಹುಲ್‌ SCAMವ್ಯಾಖ್ಯಾನದಲ್ಲಿ “ಸೇವೆ’ಇದೆಯಾ:ಪ್ರಧಾನಿ ಮೋದಿ ಪ್ರಶ್ನೆ

03:11 PM Feb 07, 2017 | Team Udayavani |

ಹೊಸದಿಲ್ಲಿ : ದೇಶದ ಆರ್ಥಿಕತೆಯನ್ನು ಸರಿದಾರಿಗೆ ತರಲು ಮತ್ತು ದೇಶದಲ್ಲಿನ ಭ್ರಷ್ಟಾಚಾರ ಮತ್ತು ಕಪ್ಪು ಹಣಕ್ಕೆ ಲಗಾಮು ಹಾಕಲು 500 ರೂ. ಮತ್ತು 1,000 ರೂ. ಕರೆನ್ಸಿ ನೋಟುಗಳ ಅಪನಗದೀಕರಣದಂತಹ ದಿಟ್ಟ ಹೆಜ್ಜೆ ಅನಿವಾರ್ಯವಾಗಿತ್ತು; ಅಂತೆಯೇ ದೇಶದ ಭದ್ರತೆಗಾಗಿ ಸರ್ಜಿಕಲ್‌ ದಾಳಿ ಕೂಡ ಅಗತ್ಯವಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಂದು ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯ ಮಂಡಿಸಿ ಮಾತನಾಡುತ್ತಾ ಹೇಳಿದರು.

Advertisement

ಕಾಂಗ್ರೆಸ ಉಪಾಧ್ಯಕ್ಷ ರಾಹುಲ್‌ ಗಾಂಧಿ ಸ್ಕ್ಯಾಮ್‌ ಗೆ ನೀಡಿದ್ದ “ಸೇವೆ, ಆತ್ಮವಿಶ್ವಾಸ, ಸಾಮರ್ಥ್ಯ ಮತ್ತು ನಮ್ರತೆ’ ಯ ವ್ಯಾಖ್ಯಾನಕ್ಕೆ ತಿರುಗೇಟು ನೀಡಿದ ಪ್ರಧಾನಿ ಮೋದಿ, ಕಾಂಗ್ರೆಸ್‌ ನಡೆಸಿರುವ ಸ್ಕ್ಯಾಮ್‌ಗಳಲ್ಲಿ ಸೇವೆ ಎಂಬುದು ಇದೆಯೇ ? ಅವುಗಳಲ್ಲಿ ಸೇವೆಯನ್ನು ಕಾಣುವುದಾದರೂ ಹೇಗೆ ? ಎಂದು ಪ್ರಶ್ನಿಸಿದರಲ್ಲದೆ, ಕಾಂಗ್ರೆಸ್‌ ಪಕ್ಷ ದೇಶವನ್ನೇ ಲೂಟಿ ಮಾಡಿದೆ ಎಂದು ಆರೋಪಿಸಿದರು. 

ತಮ್ಮ ಸರಕಾರದ ಪ್ರತಿಯೊಂದು ಕ್ರಾಂತಿಕಾರಕ ಕ್ರಮವನ್ನು ಟೀಕಿಸುವ ಪ್ರವೃತ್ತಿಯನ್ನೇ ರೂಢಿಸಿಕೊಂಡಿರುವ ವಿರೋಧ ಪಕ್ಷಗಳ ಮೇಲೆ ಚಾಟಿ ಬೀಸಿದ ಪ್ರಧಾನಿ ಮೋದಿ, ಹೊಸ ಭರವಸೆಯೆಡೆಗೆ ದೇಶವನ್ನು ಒಯ್ತುವ ಕೇಂದ್ರದ ಕ್ರಮಗಳನ್ನು ಸಮರ್ಥಿಸಿಕೊಂಡರು. 

ತಾನು ಮಾತನಾಡಿದರೆ ಸಂಸತ್ತಿನಲ್ಲಿ ಭೂಕಂಪ ಉಂಟಾಗುತ್ತದೆ ಎಂಬ ಮಾತನ್ನು ಈ ಹಿಂದೆ ಹೇಳಿದ್ದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಹೇಳಿಕೆಯನ್ನು ಕಟುವಾಗಿ ಟೀಕಿಸಿದ ಮೋದಿ, ಸ್ಕ್ಯಾಮ್‌ ಬಗ್ಗೆ ರಾಹುಲ್‌ ಮಾಡಿರುವ ವ್ಯಾಖ್ಯಾನಕ್ಕೆ ತಿರುಗೇಟು ನೀಡಿ ಕಟಕಿಯಾಡಿದರು.

“ದೇಶಕ್ಕೆ ಸ್ವಾತಂತ್ರ್ಯವನ್ನು ಒಂದು ಕುಟುಂಬದಿಂದ ಬಂದಿಲ್ಲ; ಅದು ಅನೇಕರ ಬಲಿದಾನದ ಫ‌ಲವಾಗಿ ಲಭಿಸಿದೆ. ಆದರೆ ಕಾಂಗ್ರೆಸ್‌ ಪಕ್ಷ ಮಾತ್ರ ದೇಶಕ್ಕೆ ದಕ್ಕಿರುವ ಸ್ವಾತಂತ್ರ್ಯಕ್ಕೆ ದೇಶದ ಜನತೆ ಒಂದು ಕುಟುಂಬಕ್ಕೆ ಸದಾ ಋಣಿಯಾಗಿರಬೇಕು ಎಂದು ಹೇಳುವ ಉದ್ಧಟತನ ತೋರುತ್ತಿದೆ’ ಎಂದು ಮೋದಿ ಪರೋಕ್ಷವಾಗಿ ಗಾಂಧಿ ಕುಟುಂಬವನ್ನು ಟೀಕಿಸಿದರು. 

Advertisement

ಬಿಜೆಪಿಯಿಂದ ಒಂದು ನಾಯಿಯಾದರೂ ದೇಶಕ್ಕೆ ಬಲಿದಾನ ನೀಡಿದೆಯೇ ಎಂದು ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆಯನ್ನು ಟೀಕಿಸಿ ಮಾತನಾಡಿದ ಮೋದಿ, ದೇಶದ ಜನರು ನಾಯಿ ಸಂಸ್ಕೃತಿಯಲ್ಲಿ ಬೆಳೆದು ಬಂದವರಲ್ಲ; ಕಾಂಗ್ರೆಸ್‌ ಪಕ್ಷ ಪ್ರತಿಯೊಂದು ವಿಷಯದಲ್ಲೂ ರಾಜಕೀಯ ಮಾತುತ್ತಿದೆ. ಕಾಂಗ್ರೆಸ್‌ಗೆ ಬಡವರಿಗಿಂತಲೂ ಮಿಗಿಲಾಗಿ ಚುನಾವಣೆಯ ಬಗ್ಗೆಯೇ ಚಿಂತೆ ಇದೆ’ ಎಂದು ಮೋದಿ ವಾಕ್‌ ದಾಳಿ ನಡೆಸಿದರು. 

ನೋಟು ಅಪನಗದೀಕರಣ ಬಗ್ಗೆ ಸರಕಾರ ಸಂಸತ್ತಿನಲ್ಲಿ ಚರ್ಚೆಗೆ ಸಿದ್ಧವಿತ್ತು. ಆದರೆ ವಿರೋಧ ಪಕ್ಷಗಳು ಒಂದು ದಿನವೂ ಅದಕ್ಕೆ ಅವಕಾಶ ನೀಡದೆ ಬರೀ ಗದ್ದಲ ನಡೆಸಿ ಅತ್ಯಮೂಲ್ಯ ಸಂಸತ್‌ ಕಲಾಪವನ್ನು ಹಾಳುಗೆಡಹಿದವು ಎಂದು ಮೋದಿ ಟೀಕಿಸಿದರು.

ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧ ಸರಕಾರ ನೋಟು ನಿಷೇಧದ ಕ್ರಮಕೈಗೊಂಡಿರುವಂತೆಯೇ ಇನ್ನು ಬೇನಾಮಿ ಆಸ್ತಿ ಹೊಂದಿರುವವರ ವಿರುದ್ಧ ಕಠಿನ ಕ್ರಮತೆಗೆದುಕೊಳ್ಳಲಿದೆ; ಸಾಲ ಮಾಡಿದವರು ಸಾಲ ತೀರಿಸಲೇಬೇಕು; ಬೇನಾಮಿ ವ್ಯವಹಾರವು ಕಪ್ಪುಹಣದ ಬೃಹತ್‌ ಮೂಲವಾಗಿರುವುದರಿಂದ ಸರಕಾರ ಅದರ ವಿರುದ್ಧ ನಿಷ್ಠುರವಾಗಿ ವ್ಯವಹರಿಸಲಿದೆ ಎಂಬ ಎಚ್ಚರಿಕೆಯನ್ನು ಮೋದಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next