ತ್ರಿಶೂರ್ : ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷಿಣ ಭಾರತ ಪ್ರವಾಸದ 2 ನೇ ದಿನವಾದ ಬುಧವಾರ ಕೇರಳದ ತ್ರಿಶೂರ್‌ನಲ್ಲಿ ಬೃಹತ್ ರೋಡ್‌ಶೋ ನಡೆಸಿದರು, ಈ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಬಿಜೆಪಿ ಪ್ರಚಾರಕ್ಕೆ ದೊಡ್ಡ ಮಟ್ಟದ ಉತ್ತೇಜನ ಎಂದು ಪರಿಗಣಿಸಲಾಗಿದೆ.
ಕೇರಳದ ತೆಕ್ಕಿಂಕಾಡುವಿನ ಸ್ತ್ರೀ ಶಕ್ತಿ ಮೊಡಿಕೊಪ್ಪಂ ನ ಬೃಹತ್ ಸಮಾವೇಶಕ್ಕೂ ಮುನ್ನ ಭರ್ಜರಿ ರೋಡ್ ಶೋ ನಡೆಸಿದರು. ಸಾವಿರಾರು ಮಂದಿ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬೃಹತ್ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ”ತ್ರಿಶೂರ್‌ಗೆ ಬಂದಿರುವುದು ಸಂತಸ ತಂದಿದೆ. ಜನರ ಬೆಂಬಲ ಸಾಧಾರಣವಾಗಿದೆ. ಕೇರಳ ಯುಡಿಎಫ್ ಮತ್ತು ಎಲ್‌ಡಿಎಫ್‌ನಿಂದ ಬೇಸತ್ತು ಬಿಜೆಪಿಯತ್ತ ಎದುರು ನೋಡುತ್ತಿದೆ ಎಂಬುದು ಸ್ಪಷ್ಟವಾಗಿದೆ” ಎಂದು ಹೇಳಿದರು.
”I.N.D.I. Alliance ಪದೇ ಪದೇ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ. ಬಿಜೆಪಿ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಬಗ್ಗೆ ಮಾತನಾಡುತ್ತಿದ್ದು, ನಾವು ಪ್ರತಿಯೊಬ್ಬರ ನಂಬಿಕೆ ಮತ್ತು ಧರ್ಮದ ಗೌರವವನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ” ಎಂದರು.
”ಅಭಿವೃದ್ಧಿಯನ್ನು ವರ್ಧಿಸುವ ಪಕ್ಷವಿದ್ದರೆ ಅದು ಬಿಜೆಪಿಯೇ ಹೊರತು ಯಾವುದೇ ಎಡಪಕ್ಷ ಅಥವಾ ಮೈತ್ರಿಯಲ್ಲ ಎಂದು ಕೇರಳಕ್ಕೆ ತಿಳಿದಿದೆ.
ಬಿಜೆಪಿ ಇಂಡಿಯಾ ಮೈತ್ರಿಕೂಟವನ್ನು ಸೋಲಿಸುತ್ತದೆ.ಭಾರತವು ಕ್ರಿಯಾತ್ಮಕ ಅಭಿವೃದ್ಧಿಯೊಂದಿಗೆ ಮುನ್ನಡೆಯುತ್ತಿದೆ, ಆದರೆ ಮೋದಿ ಅವರ ಮೇಲಿನ ದ್ವೇಷದಿಂದಾಗಿ, ಇಂಡಿಯಾ ಮೈತ್ರಿಯು ಕೇರಳದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ” ಎಂದರು.
”ಕೇರಳದ ಮಕ್ಕಳು ಜಗತ್ತಿಗೆ ಕೊಡುಗೆ ನೀಡುತ್ತಿದ್ದಾರೆ ಮತ್ತು ಜಾಗತಿಕವಾಗಿ ನೆಲೆಸಿದ್ದಾರೆ. ಕೋವಿಡ್, ಸುಡಾನ್, ಉಕ್ರೇನ್ ಅಥವಾ ಗಾಜಾ ಆಗಿರಲಿ, ನಾವು ಅನೇಕ ಬಿಕ್ಕಟ್ಟುಗಳನ್ನು ನೋಡಿದ್ದೇವೆ. ಎಷ್ಟೇ ದೊಡ್ಡ ತೊಂದರೆಯಾದರೂ ಬಿಜೆಪಿ ಸರಕಾರ ತನ್ನೆಲ್ಲ ನಾಗರಿಕರನ್ನು ರಕ್ಷಿಸಿದೆ. ಕೇರಳದ ನರ್ಸ್‌ಗಳು ಇರಾಕ್‌ನಲ್ಲಿ ಸಿಲುಕಿಕೊಂಡಾಗ ಅವರನ್ನು ಸುರಕ್ಷಿತವಾಗಿ ಮನೆಗೆ ಕರೆತಂದಿದ್ದು ಬಿಜೆಪಿ ಸರಕಾರ” ಎಂದರು.
ಮಹಿಳೆಯರ ಬದುಕನ್ನು ಸುಗಮಗೊಳಿಸಲು ನಾವು 10 ಕೋಟಿ ಉಜ್ವಲ ಗ್ಯಾಸ್ ಸಂಪರ್ಕ, 11 ಕೋಟಿ ಪೈಪ್ ಸಂಪರ್ಕ, 12 ಕೋಟಿ ಶೌಚಾಲಯ, 1 ರೂ.ಗೆ ಕ್ಕೆ ಸ್ಯಾನಿಟರಿ ಪ್ಯಾಡ್ ಒದಗಿಸಿದ್ದೇವೆ, ಕೇರಳದ 60 ಲಕ್ಷ ಮಹಿಳೆಯರಿಗೆ ಬ್ಯಾಂಕ್ ಖಾತೆ ತೆರೆಯಲು ಸಹಾಯ ಮಾಡಿದೆವು, ಹೆರಿಗೆ ರಜೆಯನ್ನು 26 ವಾರಗಳಿಗೆ ಹೆಚ್ಚಿಸಿದೆವು.ಎಲ್ಲವೂ ಸಾಧ್ಯ ಎಂಬುದು ಮೋದಿಯವರ ಗ್ಯಾರಂಟಿಯಾಗಿತ್ತು.ನಾವು ವಿಕಸಿತ್ ಭಾರತ್ ಕುರಿತು ಮಾತನಾಡುವಾಗ, ನಮ್ಮ ನಾರಿ ಶಕ್ತಿಯು ಮುಂದಾಳತ್ವ ವಹಿಸಬೇಕೆಂದು ನಾವು ಬಯಸುತ್ತೇವೆ” ಎಂದರು.
ಲಕ್ಷದ್ವೀಪದಲ್ಲಿ ಪ್ರಧಾನಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಿ 1,150 ಕೋಟಿ ರೂಪಾಯಿಗಳ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಬುಧವಾರ ಮಾಡಿದರು.
ನೂರಾರು ದ್ವೀಪವಾಸಿಗಳು ಭಾಗವಹಿಸಿದ್ದ ಸಮಾರಂಭದಲ್ಲಿ ಯೋಜನೆಗಳನ್ನು ಪ್ರಾರಂಭಿಸಿದ್ದು, ಕೊಚ್ಚಿ-ಲಕ್ಷದ್ವೀಪ ದ್ವೀಪಗಳ ಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಸಂಪರ್ಕ (KLI – SOFC) ಯೋಜನೆಯನ್ನು ಒಳಗೊಂಡಿದೆ, ಇದನ್ನು ಪ್ರಧಾನಿ ಮೋದಿ 2020 ರ ಆಗಸ್ಟ್ ನ ಲ್ಲಿ ಕೆಂಪು ಕೋಟೆಯಲ್ಲಿ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಘೋಷಿಸಿದ್ದರು. ಪರಿವರ್ತನೆಯ ಉಪಕ್ರಮ ಲಕ್ಷದ್ವೀಪ ದ್ವೀಪದಲ್ಲಿ ನಿಧಾನಗತಿಯ ಇಂಟರ್ನೆಟ್ ವೇಗದ ಸವಾಲನ್ನು ನಿವಾರಿಸುವ ಗುರಿಯನ್ನು ಹೊಂದಿದೆ.
ಇದು ದ್ವೀಪಗಳಲ್ಲಿ 1.7 Gbps ನಿಂದ 200 Gbps ಗೆ 100 ಪಟ್ಟು ಹೆಚ್ಚು ಇಂಟರ್ನೆಟ್ ವೇಗವನ್ನು ಹೆಚ್ಚಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಕ್ಷದ್ವೀಪವನ್ನು ಈಗ ಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಕೇಬಲ್ ಮೂಲಕ ಸಂಪರ್ಕಿಸಲಾಗಿದ್ದು, ಸಂವಹನ ಮೂಲಸೌಕರ್ಯದಲ್ಲಿ ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತದೆ. ಇದು ಇಂಟರ್ನೆಟ್ ಸೇವೆಗಳು, ಟೆಲಿಮೆಡಿಸಿನ್, ಇ-ಆಡಳಿತ, ಶಿಕ್ಷಣ, ಡಿಜಿಟಲ್ ಬ್ಯಾಂಕಿಂಗ್, ಕರೆನ್ಸಿ ಬಳಕೆ ಮತ್ತು ದ್ವೀಪಗಳಲ್ಲಿ ಸಾಕ್ಷರತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.
ಕದ್ಮತ್‌ನಲ್ಲಿ ಕಡಿಮೆ ತಾಪಮಾನದ ಥರ್ಮಲ್ ಡಿಸಲೈನೇಷನ್(LTTD) ಸ್ಥಾವರವನ್ನು ಸಹ ಪ್ರಧಾನಿ ಉದ್ಘಾಟಿಸಿದ್ದು, ಇದು ಪ್ರತಿದಿನ 1.5 ಲಕ್ಷ ಲೀಟರ್ ಶುದ್ಧ ಕುಡಿಯುವ ನೀರನ್ನು ಉತ್ಪಾದಿಸುತ್ತದೆ.