ನವದೆಹಲಿ: ಜಮ್ಮುವಿನಲ್ಲಿ ಭಾರತೀಯ ವಾಯುಪಡೆ ನೆಲೆ ಮೇಲೆ ಡ್ರೋನ್ ದಾಳಿ ನಡೆದ ಘಟನೆ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಮತ್ತು ಎನ್ ಎಸ್ ಎ ಅಜಿತ್ ದೋವಲ್ ಅವರನ್ನು ಭೇಟಿಯಾಗಿ ಮಹತ್ವದ ಸಭೆಯನ್ನು ನಡೆಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮಹಿಳಾ ವಿಶ್ವವಿದ್ಯಾಲಯ ಪರೀಕ್ಷೆ ಘೋಷಣೆ; ಎಐಡಿಎಸ್‌ಒ ಪ್ರತಿಭಟನೆ
ಈ ಮಹತ್ವದ ಸಭೆಯಲ್ಲಿ ವಾಯುಪಡೆಯ ಮುಖ್ಯಸ್ಥರು ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರಿಗೆ ಘಟನೆ ಬಗ್ಗೆ ವಿವರ ನೀಡಿರುವುದಾಗಿ ಮೂಲಗಳು ಹೇಳಿವೆ. ಮುಖ್ಯವಾಗಿ ರಾಜನಾಥ್ ಸಿಂಗ್ ಅವರು ಎರಡು ದಿನಗಳ ಲಡಾಖ್ ಭೇಟಿಯನ್ನು ಪೂರ್ಣಗೊಳಿಸಿ ಹಿಂದಿರುಗಿದ ಒಂದು ದಿನದ ನಂತರ ಈ ಸಭೆ ನಡೆದಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ನಡೆದ ಉನ್ನತ ಮಟ್ಟದ ಸಭೆಯ ಅಜೆಂಡಾದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಸಭೆಯಲ್ಲಿ ಜಮ್ಮು-ಕಾಶ್ಮೀರ ಮತ್ತು ವಾಸ್ತವ ನಿಯಂತ್ರಣ ರೇಖೆಯಲ್ಲಿನ ವಿಷಯಗಳೇ ಪ್ರಮುಖ ಅಜೆಂಡವಾಗಿರಬಹುದು ಎಂದು ವರದಿ ವಿವರಿಸಿದೆ.
ಭದ್ರತೆಯ ದೃಷ್ಟಿಯಲ್ಲಿ ಭಾನುವಾರ ನಸುಕಿನ ವೇಳೆ ಜಮ್ಮುವಿನಲ್ಲಿರುವ ಭಾರತೀಯ ವಾಯುನೆಲೆ ಮೇಲೆ ಡ್ರೋನ್ ಮೂಲಕ ಸ್ಫೋಟಕವನ್ನು ಬೀಳಿಸಿ ದಾಳಿ ನಡೆಸಿರುವುದು ಗಂಭೀರವಾದ ವಿಚಾರವಾಗಿದೆ. ಪ್ರಕರಣದ ತನಿಖೆಯನ್ನು ಈಗಾಗಲೇ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಲಾಗಿದೆ.