ನವದೆಹಲಿ : ಎರಡನೇ ಬಾರಿಗೆ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇದೇ ಆಗಸ್ಟ್ 15ರಂದು ನವದೆಹಲಿಯ ಕೆಂಪುಕೋಟೆಯ ಮೇಲಿನಿಂದ ಸತತ ಆರನೇ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಈ ಐತಿಹಾಸಿಕ ಭಾಷಣದಲ್ಲಿ ಯಾವೆಲ್ಲಾ ವಿಷಯಗಳನ್ನು ಪ್ರಸ್ತಾಪಿಸಬೇಕೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರು ದೇಶವಾಸಿಗಳ ಅಭಿಪ್ರಾಯವನ್ನು ಸಂಗ್ರಹಿಸಲು ಮುಂದಾಗಿದ್ದಾರೆ.
ದೇಶವಾಸಿಗಳು ತಮ್ಮ ಅಭಿಪ್ರಾಯ, ಅನಿಸಿಕೆ ಸಹಿತ ತಮ್ಮ ವಿಚಾರಗಳನ್ನು ನಮೋ ಆ್ಯಪ್ ನಲ್ಲಿ ಅಪ್ಲೋಡ್ ಮಾಡುವ ಮೂಲಕ ಪ್ರಧಾನಿಯವರಿಗೆ ತಲುಪಿಸಬಹುದಾಗಿರುತ್ತದೆ.
‘ಆಗಸ್ಟ್ 15ರಂದು ಕೆಂಪುಕೋಟೆಯ ಮೇಲೆ ನಾನು ಮಾಡಲಿರುವ ಭಾಷಣದಲ್ಲಿ ಪ್ರಸ್ತಾಪಿಸಬೇಕಾದ ಅಂಶಗಳ ಕುರಿತಾದಂತೆ ನಿಮ್ಮ ಯೋಚನೆಗಳನ್ನು ನಾನು ಆಹ್ವಾನಿಸಲು ಇಷ್ಟಪಡುತ್ತೇನೆ. ನಿಮ್ಮ ಯೋಚನೆಗಳೂ ಕೆಂಪುಕೋಟೆಯ ಮೂಲಕ ಈ ದೇಶದ 130 ಕೋಟಿ ಜನರ ಕಿವಿಯನ್ನು ತಲುಪಲಿ. ನಿಮ್ಮ ಯೋಚನೆಗಳಿಗೆ ಅಕ್ಷರ ರೂಪ ನೀಡಿ ನಮೋ ಆ್ಯಪ್ ಮೂಲಕ ಕಳುಹಿಸಿ’ ಎಂದು ಪ್ರಧಾನಿ ಮೋದಿ ಅವರು ತನ್ನ ಟ್ವಟ್ಟರ್ ಅಕೌಂಟಿನಲ್ಲಿ ಬರೆದುಕೊಂಡಿದ್ದಾರೆ.
Related Articles
ತನ್ನ ಸರಕಾರದ ಎಲ್ಲಾ ಕಾರ್ಯಕ್ರಮಗಳಲ್ಲಿ ಈ ದೇಶದ ಪ್ರತೀ ಪ್ರಜೆಯನ್ನೂ ಪಾಲುದಾರರನ್ನಾಗಿಸುವ ಮೂಲಕ ಪ್ರಧಾನಿ ಅವರು ತಮ್ಮ ಈ ಸರಕಾರವನ್ನು ಪ್ರಜಾಸರಕಾರವೆಂದು ತನ್ನನ್ನು ಪ್ರಧಾನ ಸೇವಕನೆಂದೂ ಕರೆದುಕೊಂಡಿರುವುದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.