Advertisement

ಕಾಂಗ್ರೆಸ್‌ ಏಟಿಗೆ ಮೋದಿ ತಿರುಗೇಟು

10:38 AM Feb 08, 2017 | Karthik A |

ಹೊಸದಿಲ್ಲಿ: ಎಲ್ಲವೂ ನಾವು ಮಾಡಿದ್ದು, ಎಲ್ಲವೂ ನಮ್ಮಿಂದಲೇ ಎಂದೇ ಹೇಳುತ್ತಿದ್ದೀರಿ. ನೀವು ಯೋಚನೆ ಮಾಡಿದ್ದು ಹೌದು, ಆದರೆ ಯಾವುದನ್ನು ಜಾರಿಗೆ ತಂದಿದ್ದೀರಿ? ಇದು ಕಾಂಗ್ರೆಸ್‌ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ನೇರ ವಾಗ್ಧಾಳಿ.

Advertisement

ಲೋಕಸಭೆಯಲ್ಲಿ ಮಂಗಳವಾರ ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಿದ ಮೋದಿ, ಕಾಂಗ್ರೆಸ್‌ ಸಹಿತ ಎಲ್ಲ ವಿಪಕ್ಷಗಳನ್ನು ನೇರವಾಗಿ ತರಾಟೆಗೆ ತೆಗೆದುಕೊಂಡರು. ಲೋಕ ಸಭೆಯಲ್ಲಿ ಸೋಮವಾರವಷ್ಟೇ ಕಾಂಗ್ರೆಸ್‌ನ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸಹಿತ ವಿಪಕ್ಷ ನಾಯಕರು ಆಡಿದ ಪ್ರತಿ ಮಾತುಗಳಿಗೆ ಟಾಂಗ್‌ ಕೊಟ್ಟರು. ಇದಷ್ಟೇ ಅಲ್ಲ, ಸದನದಿಂದ ಹೊರಗುಳಿದಿದ್ದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಭೂಕಂಪದ ವಿಚಾರಕ್ಕೆ ಕುಟುಕಿದರು.

ನೋಟು ಅಪಮೌಲ್ಯ
1. ನೋಟು ಅಪಮೌಲ್ಯದಿಂದ ಜನರಿಗೆ ಸಮಸ್ಯೆಯಾಗಿದೆ ಎಂಬುದು ಗೊತ್ತು. ಆದರೆ ಈ ನಿರ್ಧಾರಕ್ಕೆ ಇದು ಪಕ್ವವಾಗಿದ್ದ ಕಾಲ. ಆರ್ಥಿಕತೆ ಉತ್ತಮವಾಗಿದ್ದಾಗಲೇ ಇಂಥ ನಿರ್ಧಾರ ತೆಗೆದುಕೊಳ್ಳಬೇಕು. ಇದು ಹೇಗೆಂದರೆ, ವೈದ್ಯರೊಬ್ಬರು ರೋಗಿಗೆ ಆಪರೇಶನ್‌ ಮಾಡುವಾಗ, ಯಾವುದೇ ಸಮಸ್ಯೆಯಾಗದೆ ಗುಣಮುಖನಾಗಿರಬೇಕು ಎಂದೇ ಬಯಸುತ್ತಾರೆೆ. ಹಾಗೆಯೇ ಅಪಮೌಲ್ಯ ಕೂಡ. ಆರ್ಥಿಕತೆ ಉತ್ತಮವಾಗಿದ್ದಾಗ ಇಂಥ ನಿರ್ಧಾರ ತೆಗೆದುಕೊಂಡರೆ, ಒಂದಷ್ಟು ದಿನ ಪೆಟ್ಟಾದರೂ ಅನಂತರ ಸುಧಾರಿಸುತ್ತದೆ.

2. ಅಪಮೌಲ್ಯವಾದ ಮೇಲೆ 150 ಬಾರಿ ನಿಯಮ ಬದಲಾವಣೆ ಮಾಡಲಾಗಿದೆ ಎಂದು ಆರೋಪಿಸಿದ್ದೀರಿ. ಹೌದು, ಜನರ ಅನುಕೂಲಕ್ಕಾಗಿ ಬದಲಾವಣೆ ಮಾಡಿದ್ದೇವೆ. ಆದರೆ ಇದ್ಯಾವುದರ ಕಾರಣವೂ ಇಲ್ಲದೆ ನರೇಗಾ ಯೋಜನೆ ಜಾರಿಗೆ ತರುವಾಗ 1,035 ಬಾರಿ ಬದಲಾವಣೆ ತರಲಾಗಿದೆ. ಇದು ನೆನಪಿಲ್ಲವೇ?

3. ಸಾಮಾನ್ಯವಾಗಿ ದೀಪಾವಳಿ ಅನಂತರ ವ್ಯಾಪಾರದಲ್ಲಿ ಇಳಿಮುಖವಾಗುವ ಸಾಧ್ಯತೆ ಗಳು ಹೆಚ್ಚು. ಹೀಗಾಗಿ ಹಣದ ಓಡಾಟ ಕಡಿಮೆ ಇರುತ್ತದೆ ಎಂಬ ಕಾರಣಕ್ಕಾಗಿಯೇ ನ.8ರಂದೇ ಈ ನಿರ್ಧಾರ ತೆಗೆದುಕೊಳ್ಳಲಾಯಿತು.

Advertisement

4. ಅಪಮೌಲ್ಯ  ನಿರ್ಧಾರ ತೆಗೆದುಕೊಳ್ಳುವಾಗ ಜನರಿಗೆ ತೊಂದರೆಯಾಗಬಹುದು ಎಂಬುದು ಗೊತ್ತಿತ್ತು. ಇದು 15-20 ದಿನ ಗಂಭೀರವಾಗಿ ತೊಂದರೆಯಾಗಿ ಇದು 50 ದಿನಗಳ ಅನಂತರ ಸುಧಾರಿಸುತ್ತದೆ ಎಂದೇ ಅಂದಾಜು ಹಾಕಿಕೊಂಡಿದ್ದೆವು.

5. ಸ್ವಚ್ಛ ಭಾರತವನ್ನು ಆರಂಭಿಸಿದಾಗಲೂ ವಿಪಕ್ಷಗಳು ರಾಜಕೀಯ ವಿಚಾರ ಮಾಡಿಕೊಂಡವು. ಇದು ರಾಜಕಾರಣಕ್ಕೆ ಸೀಮಿತ ವಿಚಾರವಾಗಿರಲಿಲ್ಲ. ಇದೀಗ ನೋಟು ಅಪಮೌಲ್ಯದ ಮೂಲಕ ಕ್ಲೀನ್‌ ಇಂಡಿಯಾ ಕಾರ್ಯಾಚರಣೆ ಶುರು ಮಾಡಿದ್ದೇವೆ.

ಮಲ್ಲಿಕಾರ್ಜುನ ಖರ್ಗೆ
1. ಸ್ವಾತಂತ್ರ್ಯ ಸಮರದಲ್ಲಿ ನಮ್ಮ ಕಡೆಯಿಂದ ಯಾರೂ ಹೋರಾಟ ಮಾಡಲಿಲ್ಲವೆಂದು ಖರ್ಗೆ ಹೇಳಿದ್ದರು. ಹೌದು. ಸ್ವಾತಂತ್ರ್ಯ ಸಿಕ್ಕಿದ ಬಳಿಕ ಹುಟ್ಟಿದವರಲ್ಲಿ ನಾನೂ ಒಬ್ಬ. ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಳ್ಳುವ ಅದೃಷ್ಟ ಸಿಗಲಿಲ್ಲ. ಆದರೆ ದೇಶವನ್ನು ಔನ್ನತ್ಯಕ್ಕೆ ತಲುಪಿಸುವ ಅವಕಾಶ ನಮಗೆ ಸಿಕ್ಕಿದೆ.

2. ಕಾಂಗ್ರೆಸ್‌ ಹುಟ್ಟುವ ಮುನ್ನವೇ ದೇಶದ ಸ್ವಾತಂತ್ರ್ಯಕ್ಕಾಗಿ 1857ರ ಸೇನಾ ದಂಗೆ ಬಳಿಕ ಸಾವಿರಾರು ಮಂದಿ ಪ್ರಾಣ ಬಿಟ್ಟಿದ್ದರು. ಜಾತಿ, ಧರ್ಮದ ಬೇಧಭಾವವಿಲ್ಲದೆ ಎಲ್ಲರೂ ದೇಶಕ್ಕಾಗಿ ಪ್ರಾಣ ಬಿಟ್ಟಿದ್ದಾರೆ.

3. ನೀವು ಸ್ವಾತಂತ್ರ್ಯ ಹೋರಾಟವನ್ನು ಒಂದು ಕುಟುಂಬಕ್ಕೆ ಸೀಮಿತ ಮಾಡಿದ್ದೀರಿ. ಆದರೆ ಅದೊಂದು ಕುಟುಂಬವಲ್ಲ. ದೇಶದ ಹಲವಾರು ಮಂದಿ ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತಿದ್ದಾರೆ.

ಪ್ರಜಾಪ್ರಭುತ್ವ
1. ಕಾಂಗ್ರೆಸ್‌ನ 70 ವರ್ಷಗಳ ಪ್ರಜಾಸತ್ತಾತ್ಮಕ ಆಡಳಿತದಿಂದಾಗಿಯೇ ನಾನು (ಮೋದಿ) ಪ್ರಧಾನಿಯಾಗಲು ಸಾಧ್ಯವೆಂದು ಹೇಳಿದ್ದೀರಿ. ಹೌದು, ಆದರೆ ನೀವು ಹೇಗೆ ಪ್ರಜಾಪ್ರಭುತ್ವ ರಕ್ಷಣೆ ಮಾಡಿದ್ದೀರಿ ಎಂಬುದು ಜನರಿಗೆ ಗೊತ್ತಿದೆ ಬಿಡಿ.

2. 1975ರಲ್ಲಿ ತುರ್ತು ಪರಿಸ್ಥಿತಿ ಜಾರಿ ಮಾಡಿ, ಇಡೀ ದೇಶದ ಜನರನ್ನು ಜೈಲಿಗೆ ತಳ್ಳಲಾಗಿತ್ತು. ಪತ್ರಿಕೆಗಳು ಮುಚ್ಚಿದ್ದವು. ಆಗ ನಿಜವಾಗಿಯೂ ಗೆದ್ದದ್ದು ಜನರ ಶಕ್ತಿ. ಇದನ್ನು ಅರ್ಥ ಮಾಡಿಕೊಳ್ಳದೇ ಅನಂತರದಲ್ಲಿ ಇಂದಿರಾ ಗಾಂಧಿ ಅವರೇ ಸೋತು ಹೋದರು.

3. ಜನರ ಇಂಥ ಅಗಾಧ ಶಕ್ತಿಯಿಂದಲೇ ನಾನೀಗ ಪ್ರಧಾನಿಯಾಗಿ ನಿಂತಿದ್ದೇನೆ. ನನ್ನಂಥ ಹಿಂದುಳಿದ ವ್ಯಕ್ತಿಯೂ ಪ್ರಧಾನಿಯಾಗಬಹುದು ಎಂದು ತೋರಿಸಿದ್ದು ಅದೇ ಜನರ ಶಕ್ತಿಯ ಪ್ರಜಾಪ್ರಭುತ್ವ.

ಸರ್ಜಿಕಲ್‌ ದಾಳಿ
1. ಇದೊಂದು ಅತಿದೊಡ್ಡ ನಿರ್ಧಾರ ಮತ್ತು ಇದರಲ್ಲಿ ನಾವು ಯಶಸ್ಸು ಗಳಿಸಿದೆವು. ಸರ್ಜಿಕಲ್‌ ದಾಳಿಯಾದ ಮೊದಲ 24 ಗಂಟೆ ವಿವಿಧ ನಾಯಕರು ವಿರೋಧಿಸಿ ಮಾತನಾಡಿದರು. ಆದರೆ ಅನಂತರ ಅವರು ತಮ್ಮ ಭಾಷೆ ಬದಲಿಸಿಕೊಂಡರು.

2. ಸರ್ಜಿಕಲ್‌ ಸ್ಟ್ರೈಕ್‌ ಅತಿದೊಡ್ಡ ಯಶಸ್ಸು ಸಾಧಿಸಿದೆ ಎಂದರೆ ನಿಮಗೆ(ವಿಪಕ್ಷಗಳು) ತೊಂದರೆಯಾಗುತ್ತದೆ ಎಂಬುದು ಗೊತ್ತು. ಏಕೆಂದರೆ ಇದನ್ನು ನೀವು ಜನರಿಗೆ ಹೇಳಲಿಲ್ಲ. ಇದಕ್ಕೆ ಕಾರಣ ನಿಮ್ಮೊಳಗೆ ನೀವು ನೋವು ಅನುಭವಿಸುತ್ತಿರುವುದು.

3. ನೋಟು ಅಪಮೌಲ್ಯ ವಿಚಾರವನ್ನು ಏಕೆ ರಹಸ್ಯ ವಾಗಿಡಲಾಗಿತ್ತು ಎಂಬುದನ್ನು ಎಲ್ಲರೂ ಕೇಳಿದರು. ಆದರೆ ಸರ್ಜಿಕಲ್‌ ಸ್ಟ್ರೈಕ್‌ ನಿರ್ಧಾರವನ್ನು ಏಕೆ ರಹಸ್ಯ ವಾಗಿ ಇಟ್ಟಿದ್ದೆವು ಎಂಬ ಬಗ್ಗೆ ಯಾರೂ ಕೇಳಲಿಲ್ಲ.

ಸಂಸತ್‌ ವಾಶ್‌ ಔಟ್‌
1. ಕಾಂಗ್ರೆಸ್‌ನವರಿಗಾಗಲಿ, ಇತರ ವಿರೋಧ ಪಕ್ಷಗಳಿಗಾಗಲಿ ಸಂಸತ್‌ಗೆ ಬಂದು ಚರ್ಚಿಸುವ ಆಸಕ್ತಿ ಇಲ್ಲ. ಎಲ್ಲಿ ನೋಟು ಅಪಮೌಲ್ಯದ ಬಗ್ಗೆ ಸಂಸತ್‌ನಲ್ಲಿ ಚರ್ಚೆಯಾದರೆ ಮೋದಿಗೆ ಲಾಭವಾಗುತ್ತದೆಯೋ ಎಂಬ ಕಾರಣಕ್ಕೆ ದೂರ ಉಳಿದಿರಿ.

2. ನಿಮಗೆ ಸಂಸತ್‌ ಚರ್ಚೆಗಿಂತ ಬೇಕಾಗಿರುವುದು ಟಿವಿಗಳ ಬೈಟ್‌. ಅದರ ಮುಂದಷ್ಟೇ ಮಾತನಾಡಿದಿರಿ. ಹೀಗಾಗಿಯೇ ಸಂಸತ್‌ನ ಕಲಾಪದಲ್ಲಿ ಪಾಲ್ಗೊಳ್ಳಲಿಲ್ಲ.

ಕಾಂಗ್ರೆಸ್‌ಗೆ ಹೇಳಿದ್ದು
1. ನಿಮಗೆ ನಿಮ್ಮ ಕೆಲಸವೇನು ಎಂಬುದು ಪೂರ್ಣವಾಗಿ ಗೊತ್ತಿದೆ. ಆದರೆ ಮಾಡಲು ಮನಸ್ಸಿಲ್ಲ ಅಷ್ಟೇ. ಅಲ್ಲದೆ ನೀವು ಮಾಡುತ್ತಿರುವ ತಪ್ಪುಗಳ ಬಗ್ಗೆಯೂ ಗೊತ್ತಿದೆ. ಆದರೆ ಇದನ್ನು ಒಪ್ಪಿಕೊಳ್ಳಲು ತಯಾರಿಲ್ಲವಷ್ಟೇ.

2. ಒಂದು ವೇಳೆ ನಾವು (ಬಿಜೆಪಿ) ಯಾವುದಾದರೂ ಯೋಜನೆಯ ಹೆಸರು ಹೇಳಿದರೆ ಅದನ್ನು ನಾವೇ (ಕಾಂಗ್ರೆಸ್‌) ಮಾಡಿದ್ದು ಎಂದು ಹೇಳುತ್ತೀರಿ. ಹೌದು ನಾನು ಹೇಳುತ್ತೇನೆ, ನಿಮ್ಮದೇ ಮೈದಾನದಲ್ಲಿ ನಾನು ಆಟವಾಡುತ್ತಿದ್ದೇನೆ.

ರಾಹುಲ್‌ ಗಾಂಧಿ ಅವರನ್ನು ಉದ್ದೇಶಿಸಿ
1. ಒಬ್ಬರು ಭೂಕಂಪವಾಗುವ ಬಗ್ಗೆ ಬೆದರಿಕೆ ಹಾಕಿದ್ದರು. ಇಷ್ಟು ದಿನ ಕಾಯುತ್ತಲೇ ಇದ್ದೆ, ಯಾಕೋ ಭೂಕಂಪವಾಗಲಿಲ್ಲವಲ್ಲ ಎಂದು. ನಿನ್ನೆಯಷ್ಟೇ (ಸೋಮವಾರ) ಉತ್ತರಾಖಂಡದಲ್ಲಿ ಭೂಕಂಪವಾಗಿದೆ.

2. ನಾನೇನಾದರೂ ಪಾರ್ಲಿಮೆಂಟ್‌ನಲ್ಲಿ ಮಾತನಾಡಿದರೆ ಭೂಕಂಪವಾಗುತ್ತದೆ ಎಂದೇ ಅವರು ಹೇಳಿದ್ದರು. ಅದಕ್ಕೆ ಏನೋ ಆಗಿರಬಹುದು. ಉತ್ತರಾಖಂಡ ಜನರ ಜತೆ ಕೇಂದ್ರ ಸರಕಾರವಿದೆ. ಅವರಿಗೆ ಬೇಕಾದ ಎಲ್ಲ ಸಹಾಯ ಮಾಡುತ್ತೇವೆ.

3. ಯಾರಿಗಾದರೂ ಹಗರಣದಲ್ಲಿ ಸೇವೆ ಅಥವಾ ಧನಾತ್ಮಕ ಅಂಶ ಕಾಣಲು ಸಾಧ್ಯವಿದೆಯೇ?

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next