ನವದೆಹಲಿ: ಕೋವಿಡ್ 19 ಮಾರಣಾಂತಿಕ ಸೋಂಕು ಹರಡುವಿಕೆ ನಡುವೆ ಬ್ಲ್ಯಾಕ್ ಫಂಗಸ್(ಕಪ್ಪು ಶಿಲೀಂಧ್ರ) ಬಹುದೊಡ್ಡ ಸವಾಲಿನ ಪ್ರಶ್ನೆಯಾಗಿ ಉದ್ಭವಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇದನ್ನೂ ಓದಿ:ಗಾಳಿಗೆ ತೂರಿದ ಕೋವಿಡ್ ನಿಯಮ; ನೆಲ್ಲೂರಿನಲ್ಲಿ ಉಚಿತ ಆಯುರ್ವೇದ ಔಷಧಕ್ಕೆ ಮುಗಿಬಿದ್ದ ಜನರು!
ಶುಕ್ರವಾರ(ಮೇ 21) ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿ ವೈದ್ಯರು ಮತ್ತು ಪ್ಯಾರಾಮೆಡಿಕಲ್ ಸಿಬಂದಿಯನ್ನು ಉದ್ದೇಶಿಸಿ ಮಾತನಾಡಿದ ವೇಳೆ ಕೋವಿಡ್ ನಿಂದ ಆಪ್ತರನ್ನು ಕಳೆದುಕೊಳ್ಳುವಂತಾಗಿದೆ ಎಂದು ಭಾವನಾತ್ಮಕವಾಗಿ ಹೇಳಿದರು.
ಕೋವಿಡ್ ವಿರುದ್ಧ ಎಲ್ಲಾ ರೀತಿಯಿಂದಲೂ ಶ್ರಮವಹಿಸಿ ಹೋರಾಡುತ್ತಿರುವ ನಡುವೆಯೂ ಹಲವಾರು ಮಂದಿಯನ್ನು ಕಳೆದುಕೊಳ್ಳುವಂತಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಇದು ಕೋವಿಡ್ 19 ಸೋಂಕಿನ ವಿರುದ್ಧದ ದೀರ್ಘಕಾಲದ ಹೋರಾಟವಾಗಿದೆ. ಏತನ್ಮಧ್ಯೆ ಬ್ಲ್ಯಾಕ್ ಫಂಗಸ್ ಸೋಂಕನ್ನು ತಡೆಗಟ್ಟುವ ಬಗ್ಗೆ ಸಿದ್ಧತೆ ನಡೆಸಬೇಕಾಗಿದೆ ಎಂದು ಈ ಸಂದರ್ಭದಲ್ಲಿ ಸಲಹೆ ನೀಡಿರುವುದಾಗಿ ವರದಿ ವಿವರಿಸಿದೆ.
ನೀವು ವೈರಸ್ ವಿರುದ್ಧ ಗಮನಾರ್ಹವಾಗಿ ಹೋರಾಟ ನಡೆಸುತ್ತಿದ್ದೀರಿ, ಆದರೆ ಇದೊಂದು ಸುದೀರ್ಘ ಹೋರಾಟವಾಗಿರುವುದರಿಂದ ಇಷ್ಟಕ್ಕೆ ತೃಪ್ತಿಪಟ್ಟುಕೊಳ್ಳಬಾರದು ಎಂದು ಮುಂಚೂಣಿಯ ಆರೋಗ್ಯ ಕಾರ್ಯಕರ್ತರನ್ನು ಉದ್ದೇಶಿಸಿ ವರ್ಚುವಲ್ ಸಭೆಯಲ್ಲಿ ಹೇಳಿದರು.