Advertisement

ಕಾಲಭೈರವನಿಗೆ ಪೂಜೆ ಸಲ್ಲಿಸಿ ಮೋದಿ ನಾಮಪತ್ರ ಸಲ್ಲಿಕೆ

10:00 AM Apr 27, 2019 | Vishnu Das |

ವಾರಾಣಸಿ: ಬಿಜೆಪಿ ಮತ್ತು ಎನ್‌ಡಿಎ ಮಿತ್ರಪಕ್ಷಗಳ ಭರ್ಜರಿ ಶಕ್ತಿ ಪ್ರದರ್ಶನದೊಂದಿಗೆ ಪ್ರಧಾನಿ ಮೋದಿ ಶುಕ್ರವಾರ ವಾರಾಣಸಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಗುರುವಾರವಷ್ಟೇ 7 ಕಿ.ಮೀ. ರೋಡ್‌ ಶೋ ಮಾಡಿ ದೇಗುಲಗಳ ನಗರಿಯಲ್ಲಿ ಮಿಂಚು ಹರಿಸಿದ್ದ ಮೋದಿ, ಶುಕ್ರವಾರ ಬೆಳಗ್ಗೆ 11 ಗಂಟೆಗೆ ಕಾಲಭೈರವನಿಗೆ ಪೂಜೆ ಸಲ್ಲಿಸಿ, ಅನಂತರ ಮಿತ್ರಪಕ್ಷಗಳ ನಾಯಕರೊಂದಿಗೆ ಸಾಗಿ 11.30ಕ್ಕೆ ಉಮೇದುವಾರಿಕೆ ಸಲ್ಲಿಸಿದರು.

Advertisement

ಯಾರ್ಯಾರಿದ್ದರು?
ಬಿಹಾರ ಮುಖ್ಯಮಂತ್ರಿ, ಜೆಡಿಯು ನಾಯಕ ನಿತೀಶ್‌ ಕುಮಾರ್‌, ಕೇಂದ್ರ ಸಚಿವ, ಎಲ್‌ಜೆಪಿ ಮುಖ್ಯಸ್ಥ ರಾಮ್‌ವಿಲಾಸ್‌ ಪಾಸ್ವಾನ್‌, ಶಿವಸೇನೆ ಅಧ್ಯಕ್ಷ ಉದ್ಧವ್‌ ಠಾಕ್ರೆ, ಶಿರೋಮಣಿ ಅಕಾಲಿ ದಳದ ಪ್ರಕಾಶ್‌ ಸಿಂಗ್‌ ಬಾದಲ್‌, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌, ಕೇಂದ್ರ ಸಚಿವರಾದ ರಾಜನಾಥಸಿಂಗ್‌, ಸುಷ್ಮಾ ಸ್ವರಾಜ್‌, ನಿತಿನ್‌ ಗಡ್ಕರಿ, ಎಐಡಿಎಂಕೆಯಿಂದ ಪನ್ನೀರ್‌ಸೆಲ್ವಂ ಮತ್ತಿತರರು.

ನಾಲ್ವರಿಂದ ಹೆಸರು ಶಿಫಾರಸು
ಬನಾರಸ್‌ ಹಿಂದೂ ವಿವಿಯ ಮಹಿಳಾ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಅನ್ನಪೂರ್ಣ ಶುಕ್ಲಾ, ವಾರಾಣಸಿಯಲ್ಲಿ ಪ್ರತಿಯೊಂದು ಅಂತ್ಯಸಂಸ್ಕಾರದ ವೇಳೆಯೂ ಚಿತೆಗೆ ಅಗ್ನಿಸ್ಪರ್ಶ ಮಾಡುವಂಥ ಕುಟುಂಬದ ಸದಸ್ಯರಾದ ಡೋಮ್‌ ರಾಜಾ ಜಗದೀಶ್‌ ಚೌಧರಿ, ಬಿಜೆಪಿಯ ದೀರ್ಘ‌ಕಾಲಿಕ ಕಾರ್ಯ ಕರ್ತ ಸುಭಾಷ್‌ ಚಂದರ್‌ ಗುಪ್ತಾ, ಕೃಷಿ ವಿಜ್ಞಾನಿ ರಾಮ್‌ ಶಂಕರ್‌ ಪಟೇಲ್‌ ನಾಮಪತ್ರ ಸಲ್ಲಿಕೆ ವೇಳೆ ಪ್ರಧಾನಿ ಮೋದಿ ಹೆಸರನ್ನು ಪ್ರಸ್ತಾವಿಸಿದರು. ಈ ವೇಳೆ ಮೋದಿ ಅವರು ಅನ್ನಪೂರ್ಣ ಶುಕ್ಲಾ ಮತ್ತು ಪ್ರಕಾಶ್‌ ಸಿಂಗ್‌ ಬಾದಲ್‌ ಅವರ ಕಾಲಿಗೆರಗಿ ನಮಸ್ಕರಿಸಿದ್ದೂ ಕಂಡುಬಂತು.

ಮೋದಿ ಆಸ್ತಿ ಎಷ್ಟು ಗೊತ್ತಾ?
ಪ್ರಧಾನಿ ಮೋದಿ ಅವರು ಒಟ್ಟು 2.51 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಚುನಾವಣ ಅಫಿದವಿತ್‌ನಲ್ಲಿ ಉಲ್ಲೇಖೀಸಿದ್ದಾರೆ. 1.41 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು 1.1 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದರಲ್ಲಿ ಸೇರಿದೆ.

ಯಾವುದೇ ಭೂಮಿ ಅಥವಾ ವಾಣಿಜ್ಯ ಕಟ್ಟಡ ಹೊಂದಿಲ್ಲ. ಯಾವುದೇ ಸಾಲ ಅಥವಾ ಬಾಧ್ಯತೆಯೂ ಇಲ್ಲ ಎಂದಿದ್ದಾರೆ. 2014ರ ಅಫಿದವಿತ್‌ಗೆ ಹೋಲಿಸಿದರೆ ಮೋದಿಯವರ ಆಸ್ತಿ ಪ್ರಮಾಣ ಶೇ.52ರಷ್ಟು ಹೆಚ್ಚಳವಾಗಿದೆ. ಶೈಕ್ಷಣಿಕ ಮಾಹಿತಿಯಲ್ಲಿ, ತಾವು 1978ರಲ್ಲಿ ದೆಹಲಿ ವಿವಿಯಲ್ಲಿ ಬಿ.ಎ. ಪದವಿ ಪಡೆದಿದ್ದು, 1983ರಲ್ಲಿ ಗುಜರಾತ್‌ ವಿವಿಯಿಂದ ಎಂಎ ಪದವಿ ಪಡೆದಿದ್ದಾಗಿ ಹೇಳಿದ್ದಾರೆ.

Advertisement

38,750 ರೂ.ಕೈಯಲ್ಲಿರುವ ನಗದು

4,143 ರೂ.ಬ್ಯಾಂಕ್‌ನಲ್ಲಿರುವ ಹಣ

1,13,800 ರೂ. ಮೌಲ್ಯದ ಚಿನ್ನ (4 ಉಂಗುರ)

2,26,040 ರೂ.ಇತರ ಆಸ್ತಿ

1,41,36,119 ರೂ.ಒಟ್ಟು ಚರಾಸ್ತಿ

Advertisement

Udayavani is now on Telegram. Click here to join our channel and stay updated with the latest news.

Next