ನವದೆಹಲಿ:ಮೋದಿ, ಮೋದಿ ಎಂಬ ಘೋಷಣೆಯ ನಡುವೆಯೇ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದರು. ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪುನರಾಯ್ಕೆಗೊಂಡಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಡಿವಿ ಸದಾನಂದ ಗೌಡ, ಸಂಸದರಾದ ಪ್ರತಾಪ್ ಸಿಂಹ, ಸುಮಲತಾ ಅಂಬರೀಶ್ ಕನ್ನಡದಲ್ಲಿಯೇ ಪ್ರಮಾಣವಚನ ಸ್ವೀಕರಿಸಿ ಗಮನ ಸೆಳೆದಿದ್ದರು.
ಡಿವಿ ಸದಾನಂದ ಗೌಡರು ದೇವರ ಹೆಸರಿನಲ್ಲಿ ಕನ್ನಡದಲ್ಲಿಯೇ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದರು. ಏತನ್ಮಧ್ಯೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಸಾಂಪ್ರದಾಯಿಕ ಕೊಡಗು ಶೈಲಿಯ ಉಡುಗೆ ಧರಿಸಿದ್ದರು.
ರಾಜ್ ನಾಥ್ ಸಿಂಗ್ ಅವರ ಆಶೀರ್ವಾದ ಪಡೆದು ಬಂದ ಪ್ರತಾಪ್ ಸಿಂಹ ಕನ್ನಡದಲ್ಲಿ (ದೇವರ ಹೆಸರಿನಲ್ಲಿ) ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದರು. ಅದೇ ರೀತಿ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಕನ್ನಡದಲ್ಲಿ (ದೇವರ ಹೆಸರಿನಲ್ಲಿ) ಪ್ರಮಾಣವಚನ ಸ್ವೀಕರಿಸಿ ಗಮನ ಸೆಳೆದರು.
ತೇಜಸ್ವಿ ಸೂರ್ಯ ಸಾಂಪ್ರದಾಯಿಕವಾಗಿ ಪಂಚೆ, ಬಿಳಿ ಅಂಗಿ ತೊಟ್ಟು ಮೊದಲ ಬಾರಿಗೆ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದರು.
ಮೊದಲಿಗೆ ಪ್ರಧಾನಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸಿದ್ದು, ಎರಡನೇಯವರಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ನಂತರ ಗೃಹ ಸಚಿವ ಅಮಿತ್ ಶಾ ಪ್ರಮಾಣವಚನ ಸ್ವೀಕರಿಸಿದ್ದರು.