ನವದೆಹಲಿ: ಭಾರತೀಯರು ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ವೇಳೆಯಲ್ಲಿ ವಿದೇಶಿ ವಸ್ತುಗಳ ಗುಲಾಮಗಿರಿಯನ್ನು ಕಡಿಮೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ಮೇ 06) ಜೈನ್ ಅಂತಾರಾಷ್ಟ್ರೀಯ ವ್ಯಾಪಾರ ಸಂಸ್ಥೆಯ “JITO” ಕನೆಕ್ಟ್ 2022 ವಾಣಿಜ್ಯ ಸಭೆಯ ವರ್ಚುವಲ್ ಉದ್ಘಾಟನೆ ವೇಳೆ ಮಾತನಾಡುತ್ತ ಕರೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಕಾಂಗ್ರೆಸ್ ನವರು ದಾಖಲಾತಿ ಕೊಟ್ಟರೆ ಎಲ್ಲರೂ ರಾಜೀನಾಮೆ ಕೊಡುತ್ತಾರೆ: ಸಚಿವ ಶ್ರೀರಾಮುಲು
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನಾವು ವೋಕಲ್ ಫಾರ್ ಲೋಕಲ್ ಮಂತ್ರಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ವಿದೇಶಿ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಬೇಕೆಂದು ಹೇಳಿದರು.
“ಇಂದು ದೇಶದಲ್ಲಿ ಪ್ರತಿಭೆ, ವ್ಯಾಪಾರ ಮತ್ತು ತಂತ್ರಜ್ಞಾನಕ್ಕೆ ಎಷ್ಟು ಸಾಧ್ಯವೋ ಅಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ. ಇಂದು ದೇಶದಲ್ಲಿ ಪ್ರತಿದಿನ ಹತ್ತಾರು ಸ್ಟಾರ್ಟ್ ಅಪ್ ಕಂಪನಿಗಳ ನೋಂದಾವಣಿಯಾಗುತ್ತಿದೆ. ಈ ಮೂಲಕ ಪ್ರತಿವಾರ ನಾವು ಸ್ವಾವಲಂಬನೆಯತ್ತ ಸಾಗುತ್ತಿದ್ದೇವೆ” ಎಂದು ತಿಳಿಸಿದರು.
ಸ್ವಾವಲಂಬಿ ಭಾರತ ನಮ್ಮ ಮಾರ್ಗವಾಗಿದ್ದು, ಅದೇ ರೀತಿ ನಮ್ಮ ಸಂಕಲ್ಪ ಕೂಡಾ ಆಗಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಭಾರತ ಇಂದು ಬದಲಾವಣೆಯತ್ತ ಸಾಗುತ್ತಿದೆ. ಇದೀಗ ಕುಗ್ರಾಮಗಳಲ್ಲಿ ಇರುವ ಜನರು, ಸಣ್ಣ ಅಂಗಡಿ ಮತ್ತು ಸ್ವಯಂ ಸಹಾಯಕ ಗುಂಪುಗಳು ನೇರವಾಗಿ ತಮ್ಮ ವಸ್ತುಗಳನ್ನು ಸರ್ಕಾರಕ್ಕೆ ಮಾರಾಟ ಮಾಡಬಹುದಾಗಿದೆ ಎಂದು ಪ್ರಧಾನಿ ಹೇಳಿದರು.
ಇಂದು ಜಿಇಎಂ (ಗವರ್ನಮೆಂಟ್ ಇ ಮಾರ್ಕೆಟಿಂಗ್ ಪ್ಲೇಸ್) ಪೋರ್ಟಲ್ ಗೆ 40 ಲಕ್ಷಕ್ಕೂ ಅಧಿಕ ಮಂದಿ ಮಾರಾಟಗಾರರು ಸೇರ್ಪಡೆಗೊಂಡಿದ್ದಾರೆ. ಇದರೊಂದಿಗೆ ಸರ್ಕಾರದ ಪ್ರಕ್ರಿಯೆ ಕೂಡಾ ಪಾರದರ್ಶಕವಾಗಿರಿಸಲು ಸಾಧ್ಯವಾಗಲಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.