Advertisement

ಸೌರ ಒಕ್ಕೂಟಕ್ಕೆ ಭಾರತ ನಾಯಕ; 121 ದೇಶಗಳ ಒಕ್ಕೂಟ ರಚನೆ

06:00 AM Mar 12, 2018 | |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷೆಯ 121 ದೇಶಗಳ ಅಂತಾರಾಷ್ಟ್ರೀಯ ಸೌರ ಒಕ್ಕೂಟ (ಐಎಸ್‌ಎ) ಚಾಲ್ತಿಗೆ ಬಂದಿದೆ.

Advertisement

ನವದೆಹಲಿಯಲ್ಲಿ ಇದರ ಮೊದಲ ಸಮ್ಮೇಳನ ಭಾನುವಾರ ಆರಂಭವಾಗಿದ್ದು, 33 ದೇಶಗಳ ಪ್ರತಿನಿಧಿಗಳು ಆಗಮಿಸಿದ್ದಾರೆ. ಭಾರತ, ಫ್ರಾನ್ಸ್‌ ಈ ಒಕ್ಕೂಟದಲ್ಲಿ ಪ್ರಮುಖ ಸ್ಥಾನ ವಹಿಸಿದ್ದರೆ, ಆಫ್ರಿಕಾ ಖಂಡದ ಹಲವು ದೇಶಗಳು ಸದಸ್ಯರಾಷ್ಟ್ರಗಳಾಗಿವೆ. ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಒಕ್ಕೂಟವೊಂದರ ಕೇಂದ್ರ ಕಚೇರಿ ಭಾರತದಲ್ಲಿ ಸ್ಥಾಪನೆಯಾಗಲಿದೆ. ಸಮ್ಮೇಳನದ ಆತಿಥ್ಯವನ್ನು ಫ್ರಾನ್ಸ್‌ ಕೂಡ ವಹಿಸಿದ್ದು, ಫ್ರೆಂಚ್‌ ಅಧ್ಯಕ್ಷ ಇಮಾನ್ಯುವೆಲ್‌ ಮ್ಯಾಕ್ರನ್‌ ಹಾಜರಿದ್ದರು.

ಸೂರ್ಯನ ಅತ್ಯಂತ ಪ್ರಖರ ಬೆಳಕನ್ನು ಪಡೆಯುವ ದೇಶಗಳ ಒಕ್ಕೂಟವನ್ನು ಸ್ಥಾಪಿಸಿ, ಸೌರ ವಿದ್ಯುತ್‌ ಬಳಕೆಯ ತಂತ್ರಜ್ಞಾನ, ಸಂಪನ್ಮೂಲಗಳನ್ನು ಹಂಚಿಕೊಳ್ಳುವ ಬಗ್ಗೆ 2015ರಲ್ಲಿ ಮೊದಲ ಬಾರಿಗೆ ವೆಂಬ್ಲೆ ಸ್ಟೇಡಿಯಂನಲ್ಲಿ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದರು. ಈ ದೇಶಗಳನ್ನು ಮೋದಿ ಸೂರ್ಯಪುತ್ರ ದೇಶಗಳು ಎಂದು ಉಲ್ಲೇಖೀಸಿದ್ದರು. ಅಲ್ಲದೆ ಇದು ಅದೇ ವರ್ಷ ಪ್ಯಾರಿಸ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ಸ್ಪಷ್ಟ ರೂಪ ಪಡೆದಿತ್ತು. 2016ರಲ್ಲಿ ಈ ಬಗ್ಗೆ ರೂಪುರೇಷೆ ಸಿದ್ಧವಾಗಿದ್ದು, ಈ ಒಪ್ಪಂದಕ್ಕೆ ಒಳಪಡಲು ಅಂದಿನಿಂದ 121 ದೇಶಗಳು ಸಹಿ ಹಾಕಿವೆ.

ದುಪ್ಪಟ್ಟು ಉತ್ಪಾದನೆ ಗುರಿ:
ಸೌರ ವಿದ್ಯುತ್‌ ಉತ್ಪಾದನೆಗಾಗಿ ರಿಯಾಯಿತಿ ದರದಲ್ಲಿ ಹಣಕಾಸು ಮತ್ತು ಕಡಿಮೆ ರಿಸ್ಕ್ನ ಫ‌ಂಡ್‌ ಜೊತೆಗೆ ಕಡಿಮೆ ವೆಚ್ಚದ ಹಾಗೂ ಉತ್ತಮ ಗುಣಮಟ್ಟದ ಸೌರ ತಂತ್ರಜ್ಞಾನ ಲಭ್ಯವಾಗಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 2022ರ ವೇಳೆಗೆ ಭಾರತ 175 ಗಿಗಾವ್ಯಾಟ್‌ ಸೌರ ಶಕ್ತಿ ಉತ್ಪಾದನೆಯ ಗುರಿ ಹೊಂದಿದೆ. ಪ್ರಸ್ತುತ ಉತ್ಪಾದನೆಯಾಗುತ್ತಿರುವ ಸಾಮರ್ಥ್ಯದ ದುಪ್ಪಟ್ಟು ಇದಾಗಿರಲಿದೆ ಹಾಗೂ ಐರೋಪ್ಯ ಒಕ್ಕೂಟಕ್ಕಿಂತ ಹೆಚ್ಚಿನ ಪ್ರಮಾಣದ ಸೌರ ವಿದ್ಯುತ್ತನ್ನು ನಾವು ಉತ್ಪಾದಿಸಲಿದ್ದೇವೆ ಎಂದು ಹೇಳಿದ್ದಾರೆ. 2030ರ ವೇಳೆಗೆ ಈ ಒಕ್ಕೂಟ ರಾಷ್ಟ್ರಗಳಿಂದ 1 ಸಾವಿರ ಗಿ.ವ್ಯಾ ಸೌರ ವಿದ್ಯುತ್‌ ಉತ್ಪಾದನೆ ಮಾಡಲು ಉದ್ದೇಶಿಸಲಾಗಿದ್ದು, ಇದಕ್ಕೆ 65 ಲಕ್ಷ ಕೋಟಿ ರೂ. ಅಗತ್ಯವಿದೆ ಮೋದಿ ಹೇಳಿದ್ದಾರೆ.

ಐಎಸ್‌ಎ ದೇಶಗಳಿಗಾಗಿ 500 ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ ಮತ್ತು ಸೌರ ತಂತ್ರಜ್ಞಾನ ಮಿಷನ್‌ ಸ್ಥಾಪಿಸಿ ಸೌರವಿದ್ಯುತ್‌ ತಂತ್ರಜ್ಞಾನ ಮತ್ತು ಸಂಶೋಧನೆಗೆ ಬೆಂಬಲ ನೀಡಲಾಗುತ್ತದೆ. 2020ರ ವೇಳೆಗೆ ಒಂದು ಟೆರಾವ್ಯಾಟ್‌ ಸೌರವಿದ್ಯುತ್‌ ಉತ್ಪಾದನೆಗೆ 65 ಲಕ್ಷ ಕೋಟಿ ರೂ. ಬಂಡವಾಳ ಅಗತ್ಯವಿದೆ. ಇದು ಕೇವಲ ಈ ದೇಶಗಳ ಅಭ್ಯುದಯಕ್ಕೆ ಕಾರಣವಾಗುವುದಲ್ಲ. ಬದಲಿಗೆ ಭೂಮಿಯ ಮೇಲಿನ ಕಾರ್ಬನ್‌ ಅಂಶವನ್ನೂ ಕಡಿಮೆ ಮಾಡಲಿದೆ. ಸದ್ಯ ಲಭ್ಯವಿರುವ ಸೌರ ವಿದ್ಯುತ್‌ ತಂತ್ರಜ್ಞಾನ ಎಲ್ಲ ದೇಶಗಳಿಗೂ ಸಿಗಬೇಕು. ಸೌರ ಶಕ್ತಿಯನ್ನು ಕೃಷಿ, ಸೌರ ವಾಟರ್‌ ಪಂಪ್‌ಗ್ಳು, ಅಡುಗೆ ಸೇರಿ ವಿವಿಧ ರೂಪಗಳಲ್ಲಿ ಬಳಸಿಕೊಳ್ಳಬಹುದಾಗಿದೆ ಎಂದು ಫ್ರಾನ್ಸ್‌ ಅಧ್ಯಕ್ಷ ಇಮಾನ್ಯುವೆಲ್‌ ಮ್ಯಾಕ್ರನ್‌ ಹೇಳಿದ್ದಾರೆ.

Advertisement

ಫ್ರಾನ್ಸ್‌ನಿಂದ 5000 ಕೋಟಿ ರೂ.
ಅಭಿವೃದ್ಧಿಶೀಲ ದೇಶಗಳಲ್ಲಿ ಸೌರಶಕ್ತಿ ಯೋಜನೆಗಳಿಗೆ ಫ್ರಾನ್ಸ್‌ 5 ಸಾವಿರ ಕೋಟಿ ರೂ. ಅನುದಾನ ನೀಡುವುದಾಗಿ ಮ್ಯಾಕ್ರನ್‌ ಘೋಷಿಸಿದ್ದಾರೆ. ಸೌರ ಶಕ್ತಿಯ ಬಳಕೆಯಲ್ಲಿರುವ ಎಲ್ಲ ಅಡೆತಡೆಗಳನ್ನೂ ನಾವು ನಿವಾರಿಸಬೇಕಿದೆ. ಹೀಗಾಗಿ ಭಾರತದ ಸಹಭಾಗಿತ್ವದಲ್ಲಿ ಐಎಸ್‌ಎಗೆ ಈ ಅನುದಾನ ನೀಡಲು ನಿರ್ಧರಿಸಲಾಗಿದೆ ಎಂದು ಮ್ಯಾಕ್ರನ್‌ ಹೇಳಿದ್ದಾರೆ.

ವೇದಗಳ ಕಡೆಗೆ ನೋಡೋಣ
ಭಾರತದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ವೇದಗಳು, ಸೂರ್ಯನನ್ನು ಜಗತ್ತಿನ ಆತ್ಮವೆಂದು ಪರಿಗಣಿಸಿದ್ದವು. ಬದುಕಿಗೆ ಉಳಿಯಲು ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುವಂಥ ಶಕ್ತಿಯೇ ಸೂರ್ಯ. ಇಂದು ನಾವು ಹವಾಮಾನ ವೈಪರೀತ್ಯದಂಥ ಗಂಭೀರ ಸವಾಲನ್ನು ಎದುರಿಸಲು ಸೂಕ್ತ ಹಾದಿಯನ್ನು ಹುಡುಕುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ನಾವು ಭಾರತದ ಪ್ರಾಚೀನ ತತ್ವಶಾಸ್ತ್ರದ ಸಮತೋಲಿತ ಮತ್ತು ಸರ್ವಾಂಗೀಣ ದೃಷ್ಟಿಕೋನದ ಕಡೆಗೂ ಗಮನಹರಿಸಬೇಕಾದ ಅವಶ್ಯಕತೆಯಿದೆ. ಆಗ ಹವಾಮಾನ ವೈಪರೀತ್ಯದಂಥ ಸವಾಲನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಬಹುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಸೋಲಾರ್‌ ಮಾಮಾಗಳ ಹಾಡಿಗೆ ಫಿದಾ
ಭಾನುವಾರದ ಶೃಂಗದಲ್ಲಿ “ಸೋಲಾರ್‌ ಮಾಮಾ’ಗಳೆಂದೇ ಖ್ಯಾತಿ ಪಡೆದಿರುವ ಆಫ್ರಿಕಾದ ಮಹಿಳೆಯರ ಗುಂಪಿನ ಹಾಡು ಎಲ್ಲರನ್ನೂ ಮುದಗೊಳಿಸಿತು. “ಹಮ್‌ ಹೋಂಗೆ ಕಾಮ್‌ಯಾಬ್‌'(ಗೆದ್ದೇ ಗೆಲ್ಲುವೆವು) ಹಾಗೂ ಅದರ ಇಂಗ್ಲಿಷ್‌ ಅವತರಣಿಕೆ “ವಿ ಶಲ್‌ ಓವರ್‌ಕಮ್‌’ ಹಾಡನ್ನು ಇವರು ಹಾಡುತ್ತಿದ್ದಂತೆ, ಪ್ರಧಾನಿ ಮೋದಿ, ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್‌ ಸೇರಿದಂತೆ ಅಲ್ಲಿ ಸೇರಿದ್ದ ಎಲ್ಲ ಪ್ರತಿನಿಧಿಗಳೂ ಕರತಾಡನದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. ಆಫ್ರಿಕಾದ ಈ ಮಹಿಳೆಯರಿಗೆ ರಾಜಸ್ಥಾನದ ತಿಲೋನಿಯಾ ಗ್ರಾಮದಲ್ಲಿರುವ ಬೇರ್‌ಫ‌ೂಟ್‌ ಕಾಲೇಜಿನಲ್ಲಿ ಭಾರತ ಸರ್ಕಾರದ ವತಿಯಿಂದಲೇ ಸೌರಶಕ್ತಿಯ ಬಳಕೆ ಕುರಿತು ತರಬೇತಿ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next