ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಗೆ ಚಾಲನೆ ನೀಡಿ”ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಪ್ರಮುಖ ಹೆಜ್ಜೆ” ಎಂದು ಕರೆದಿದ್ದಾರೆ.
ಪ್ರಧಾನಿ ಅವರು ದೆಹಲಿಯ ವಿಜ್ಞಾನ ಭವನದಲ್ಲಿ ಲಾಜಿಸ್ಟಿಕ್ಸ್ ಪ್ರದರ್ಶನವನ್ನು ವೀಕ್ಷಿಸಿದರು. ”ಭಾರತ ಇಂದು ಪ್ರಜಾಸತ್ತಾತ್ಮಕ ಸೂಪರ್ ಪವರ್ ಆಗಿ ಹೊರಹೊಮ್ಮುತ್ತಿದೆ ಎಂದು ವಿಶ್ವದಾದ್ಯಂತ ತಜ್ಞರು ಹೇಳುತ್ತಿದ್ದಾರೆ. ಅವರು ಭಾರತದ ಅಸಾಧಾರಣ ಪ್ರತಿಭೆ ಪರಿಸರ ವ್ಯವಸ್ಥೆಯಿಂದ ಬಹಳ ಪ್ರಭಾವಿತರಾಗಿದ್ದಾರೆ. ಅಭಿವೃದ್ಧಿ ಹೊಂದಿದ ಭಾರತವಾಗಲು, ನಾವು ವಿಶ್ವದ ಇತರ ಅಭಿವೃದ್ಧಿ ಹೊಂದಿದ ದೇಶಗಳೊಂದಿಗೆ ಪರಿಣಾಮಕಾರಿಯಾಗಿ ಸ್ಪರ್ಧಿಸಬೇಕಾಗಿದೆ”ಎಂದರು.
”ಯುನಿಫೈಡ್ ಲಾಜಿಸ್ಟಿಕ್ಸ್ ಇಂಟರ್ಫೇಸ್ ಪ್ಲಾಟ್‌ಫಾರ್ಮ್ (ಯುಲಿಪ್) ಅನ್ನು ಇಂದು ಪ್ರಾರಂಭಿಸಲಾಗಿದೆ. ಇದು ರಫ್ತುದಾರರಿಗೆ ಲಾಜಿಸ್ಟಿಕ್ಸ್ ಸೇವೆಗಳನ್ನು ಸುಲಭಗೊಳಿಸುತ್ತದೆ. ಯುಲಿಪ್ ಸಾರಿಗೆ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಸಂಯೋಜಿಸುತ್ತದೆ” ಎಂದರು.
”ಇಂದು ನಾವು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿದ್ದೇವೆ. ದೇಶ ಪರಿವರ್ತನೆಯಾಗುತ್ತಿದೆ.ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯ ಪ್ರಾರಂಭ ಮತ್ತು ಅದೇ ದಿನ ಚೀತಾಗಳನ್ನು ಬಿಡುಗಡೆ ಮಾಡುವ ಭಾಗ್ಯ ದೊರಕಿದೆ. ನಮ್ಮ ಲಾಜಿಸ್ಟಿಕ್ಸ್ ಚೀತಾದ ವೇಗದಲ್ಲಿ ಚಲಿಸಬೇಕೆಂದು ನಾವು ಬಯಸುತ್ತೇವೆ” ಎಂದರು.