ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಮಾತುಕತೆ ನಡೆಸುವ ಹಿನ್ನೆಯೆಲ್ಲಿ ಫ್ರಾನ್ಸ್, ಯುಎಇ ಹಾಗೂ ಬೆಹ್ರೈನ್ ಗೆ ಭೇಟಿ ನೀಡಲು ಗುರುವಾರದಿಂದ ವಿದೇಶ ಪ್ರವಾಸ ಆರಂಭಿಸಿದ್ದಾರೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರ ಮೂರು ದೇಶಗಳ ಭೇಟಿಯ ವಿವರ ಇಲ್ಲಿದೆ.
ಪ್ರಧಾನಿ ಮೋದಿ ಗುರುವಾರ(ಆಗಸ್ಟ್ 22ರಿಂದ)ದಿಂದ ಎರಡು ದಿನಗಳ ಫ್ರಾನ್ಸ್ ಭೇಟಿಗೆ ತೆರಳಿದ್ದಾರೆ. ಇಂದು ಸಂಜೆ ಫ್ರಾನ್ಸ್ ತಲುಪಲಿರುವ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಜತೆ ರಕ್ಷಣೆ, ಪರಮಾಣು ಇಂಧನ ಹಾಗೂ ಭಯೋತ್ಪಾದನಾ ನಿಗ್ರಹದ ಕುರಿತಂತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.
ಶುಕ್ರವಾರ ಪ್ರಧಾನಿ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಎಡ್ವರ್ಡ್ ಚಾರ್ಲ್ಸ್ ಫಿಲಿಪ್ಪ ಅವರನ್ನು ಭೇಟಿಯಾಗಲಿದ್ದಾರೆ. ಬಳಿಕ ಪ್ಯಾರೀಸ್ ನಲ್ಲಿರುವ ಯುನೆಸ್ಕೋ ಕೇಂದ್ರ ಕಚೇರಿಯಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. ಅಲ್ಲದೇ 1950 ಮತ್ತು 1966ರಲ್ಲಿ ನಡೆದ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದ ಇಬ್ಬರು ಭಾರತೀಯ ಸಂತ್ರಸ್ತರ ಸ್ಮಾರಕವನ್ನು ಉದ್ಘಾಟಿಸಲಿದ್ದಾರೆ.
ಯುಎಇ ಭೇಟಿ:
ಫ್ರಾನ್ಸ್ ನಿಂದ ಶುಕ್ರವಾರ ಪ್ರಧಾನಿ ಮೋದಿ ಅವರು ಯುಎಇಗೆ ಭೇಟಿ ನೀಡಲಿದ್ದಾರೆ. ಅಲ್ಲಿ ದೇಶದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಯಾದ ಆರ್ಡರ್ ಆಫ್ ಝಾಯೇದ್ ಅನ್ನು ಮೋದಿ ಸ್ವೀಕರಿಸಲಿದ್ದಾರೆ. ಅಲ್ಲದೇ ಅಬುಧಾಬಿ ಯುವರಾಜ ಶೇಕ್ ಮೊಹಮ್ಮದ್ ಬಿನ್ ಝಾಯೇದ್ ಅಲ್ ಅವರನ್ನು ಮೋದಿ ಭೇಟಿಯಾಗಿ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ವರದಿ ತಿಳಿಸಿದೆ.
ಬೆಹರೈನ್ ಭೇಟಿ:
ಯುಎಇ ಪ್ರವಾಸದ ನಂತರ ಪ್ರಧಾನಿ ಮೋದಿ ಅವರು ಆಗಸ್ಟ್ 24ರಂದು ಎರಡು ದಿನಗಳ ಭೇಟಿಗಾಗಿ ಬೆಹರೈನ್ ಗೆ ಆಗಮಿಸಲಿದ್ದಾರೆ. ಇದರೊಂದಿಗೆ ಗಲ್ಫ್ ರಾಷ್ಟ್ರಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆ ಮೋದಿ ಅವರದ್ದಾಗಿದೆ.