Advertisement

PM Modi ವಿಪಕ್ಷಗಳು ಜನಧನ ಖಾತೆ ಮುಚ್ಚಿ ಹಣ ದೋಚಲಿವೆ

01:14 AM May 23, 2024 | Team Udayavani |

ಶ್ರಾವಸ್ತಿ: ನಾನು ನಿಮಗಾಗಿ ನಿರ್ಮಿಸಿಕೊಟ್ಟ ಮನೆ ಗಳನ್ನು ಕಾಂಗ್ರೆಸ್‌ ಮತ್ತು ಸಮಾಜ ವಾದಿ ಪಕ್ಷಗಳು ಕಿತ್ತುಕೊಳ್ಳಲಿವೆ, ನಿಮ್ಮ ಜನಧನ ಖಾತೆಗಳನ್ನು ಮುಚ್ಚಿ, ಅದರಲ್ಲಿದ್ದ ದುಡ್ಡನ್ನೂ ಕಸಿದು ಕೊಳ್ಳ ಲಿವೆ, ನಿಮ್ಮ ಮನೆಯ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಿ, ನೀರಿನ ನಲ್ಲಿಗಳನ್ನೂ ಕಿತ್ತೂಯ್ಯಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

Advertisement

ಉತ್ತರಪ್ರದೇಶದ ಶ್ರಾವಸ್ತಿಯಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಸಾಕೇತ್‌ ಮಿಶ್ರಾ ಪರ ಪ್ರಚಾರ ರ್‍ಯಾಲಿ ನಡೆಸಿ ಮಾತನಾಡಿದ ಅವರು, 60 ವರ್ಷಗಳ ಕಾಲ ಏನನ್ನೂ ಮಾಡದ ಅವರು (ಎಸ್‌ಪಿ-ಕಾಂಗ್ರೆಸ್‌), ಈಗ ಒಂದಾಗಿ ಮೋದಿ ಮತ್ತು ಅವರ ಕೆಲಸಗಳನ್ನು ನಿಲ್ಲಿಸಲು ಹೊರಟಿದ್ದಾರೆ. ಇಬ್ಬರು ಹುಡುಗರ ಫ್ಲಾಪ್‌ ಸಿನೆಮಾವನ್ನು ಮತ್ತೆ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ನಾನು ಮಾಡಿದ ಎಲ್ಲ ಕೆಲಸಗಳನ್ನೂ ಈ ಇಬ್ಬರು ಶೆಹಜಾದಾಗಳು ತಲೆ ಕೆಳಗೆ ಮಾಡಲಿದ್ದಾರೆ ಎಂದು ರಾಹುಲ್‌ ಗಾಂಧಿ ಮತ್ತು ಅಖೀಲೇಶ್‌ ಯಾದವ್‌ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

ನಾನು 50 ಕೋ. ರೂ.ಗೂ ಅಧಿಕ ಬಡ ಜನರಿಗೆ ಜನಧನ ಖಾತೆಗಳನ್ನು ಮಾಡಿಸಿಕೊಟ್ಟಿದ್ದೇನೆ. ವಿಪಕ್ಷಗಳ ಒಕ್ಕೂಟ ಅಧಿಕಾರಕ್ಕೇರಿದರೆ ಆ ಖಾತೆಗಳನ್ನು ಮುಚ್ಚಿ, ಅದರಲ್ಲಿರುವ ಹಣವನ್ನು ದೋಚಲಿವೆ. ನಾನು ಪ್ರತಿ ಗ್ರಾಮಕ್ಕೂ ವಿದ್ಯುತ್‌ ಸಂಪರ್ಕ ಕಲ್ಪಿಸಿದ್ದೇನೆ. ಅವರು ಈ ಸಂಪರ್ಕವನ್ನು ಕಡಿದು, ನಿಮ್ಮನ್ನು ಮತ್ತೆ ಕತ್ತಲಿಗೆ ನೂಕಲಿದ್ದಾರೆ. ನಾನು ಪ್ರತಿ ಮನೆಗೂ ನಲ್ಲಿಯ ಮೂಲಕ ನೀರಿನ ಸೌಲಭ್ಯ ಕಲ್ಪಿಸಿದ್ದೇನೆ. ಅವರು ನಿಮ್ಮ ಮನೆಗೆ ನುಗ್ಗಿ, ನಲ್ಲಿಗಳನ್ನು ಕಿತ್ತುಕೊಂಡು ಹೋಗಲಿದ್ದಾರೆ. ಇದರಲ್ಲಿ ಅವರು ಪರಿಣಿತರಿದ್ದಾರೆ. ಬಡ ಜನರಿಗಾಗಿ ನಾನು ನಿರ್ಮಿಸಿಕೊಟ್ಟ ಮನೆಗಳ ಕೀಲಿಕೈಗಳನ್ನು ಅವರು ಕಿತ್ತುಕೊಂಡು, ತಮ್ಮ ವೋಟ್‌ಬ್ಯಾಂಕ್‌ಗೆ ನೀಡಲಿದ್ದಾರೆ ಎಂದರು.

ಪಾಕ್‌ ಪರ ಒಲವುಳ್ಳವರು
ಕಾಂಗ್ರೆಸ್‌ ಮತ್ತು ಎಸ್‌ಪಿ “ಪಾಕ್‌ ಪರ ಒಲವು ಉಳ್ಳವರು’. ಪಾಕ್‌ನಲ್ಲಿರುವ ಅಣ್ವಸ್ತ್ರಗಳನ್ನು ತೋರಿಸಿ ನಮ್ಮ ದೇಶದ ಜನರನ್ನು ಹೆದರಿಸುವ ಕೆಲಸ ಮಾಡುತ್ತಾರೆ. ಆದರೆ ಅವರಿಗೆ 56 ಇಂಚಿನ ಎದೆಯ ಬಗ್ಗೆ ಗೊತ್ತಿಲ್ಲ. ಈಗ ಇರುವುದು ಮೋದಿಯ ಬಲಿಷ್ಠ ಸರಕಾರವೇ ಹೊರತು ದುರ್ಬಲ ಕಾಂಗ್ರೆಸ್‌ ಸರಕಾರವಲ್ಲ; ನಮ್ಮ ತಂಟೆಗೆ ಯಾರಾದರೂ ಬಂದರೆ, ಅಂಥವರ ಮನೆಗೇ ನುಗ್ಗಿ ಹೊಡೆದುಹಾಕುವಂಥ ಸರಕಾರ ನಮ್ಮದು ಎಂದೂ ಮೋದಿ ಹೇಳಿದ್ದಾರೆ.

ನೀವು ಹಾಕುವ ಮತಗಳು ಓಲೈಕೆಯ ರಾಜಕಾರಣವನ್ನು ಖಬರಸ್ಥಾನದಲ್ಲಿ ಹೂತುಹಾಕಲಿವೆ ಮತ್ತು ದೇಶಕ್ಕೆ ಉತ್ತಮ ಭವಿಷ್ಯವನ್ನು ಒದಗಿಸಲಿವೆ ಎಂದೂ ಹೇಳಿದ್ದಾರೆ.

Advertisement

ಉಗ್ರರನ್ನು ಪ್ರಧಾನಿ ಮನೆಗೆ ಕರೆಸಿ, ಬಿರಿಯಾನಿ ಕೊಡಿಸುತ್ತಾರೆ: ಮೋದಿ
ವಿಪಕ್ಷಗಳ ಒಕ್ಕೂಟ ಅಧಿಕಾರಕ್ಕೆ ಬಂದರೆ ಪೌರತ್ವ ಕಾಯ್ದೆಯನ್ನು ರದ್ದು ಮಾಡಿ, ಜಮ್ಮು -ಕಾಶ್ಮೀರದಲ್ಲಿ 370ನೇ ವಿಧಿಯನ್ನು ಮರು ಜಾರಿ ಮಾಡಲಿದೆ. ಅಂದರೆ, ಇಂದು ಯಾವೆಲ್ಲ ಭಯೋತ್ಪಾದಕರು ಜೈಲಲ್ಲಿದ್ದಾರೋ, ಅವರೆಲ್ಲರನ್ನೂ ಕಾಂಗ್ರೆಸ್‌ ತನ್ನ ಪ್ರಧಾನಮಂತ್ರಿಯ ನಿವಾಸಕ್ಕೇ ಕರೆಸಿಕೊಂಡು, ಬಿರಿಯಾನಿ ಉಣಬಡಿಸಲಿದೆ ಎಂದೂ ಮೋದಿ ದೂರಿದ್ದಾರೆ.

ಮೋದಿ ಆರೋಪಗಳೇನು?
– 60 ವರ್ಷ ಏನನ್ನೂಮಾಡದ ಎಸ್‌ಪಿ-ಕಾಂಗ್ರೆಸ್‌, ಈಗ ಮೋದಿಯ ಕೆಲಸಗಳನ್ನು ನಿಲ್ಲಿಸಲು ಹೊರಟಿದ್ದಾರೆ.
-ಕಾಂಗ್ರೆಸ್‌ ಗೆದ್ದರೆ ಉಗ್ರರನ್ನೂ ಪ್ರಧಾನಿ ನಿವಾಸಕ್ಕೆ ಕರೆಸಿಕೊಂಡು, ಬಿರಿಯಾನಿ ಉಣಬಡಿಸುತ್ತಾರೆ
– ವಿಪಕ್ಷಗಳಿಗೆ ಪಾಕ್‌ ಎಂದರೆ ಇಷ್ಟ. ಪಾಕಿಸ್ಥಾನದ ಅಣ್ವಸ್ತ್ರಗಳನ್ನು ತೋರಿಸಿ ನಮ್ಮ ದೇಶದ ಜನರನ್ನು ಹೆದರಿಸುತ್ತಾರೆ
– ಬಡವರಿಗಾಗಿ ನಾನು ನಿರ್ಮಿಸಿ ಕೊಟ್ಟ ಮನೆಗಳ ಕೀಲಿಕೈಗಳನ್ನು ಕಿತ್ತುಕೊಂಡು, ಅವರು ತಮ್ಮ ವೋಟ್‌ಬ್ಯಾಂಕ್‌ಗೆ ನೀಡಲಿದ್ದಾರೆ.
-ನೀವು ಎಚ್ಚರಿಕೆಯಿಂದ ಮತ ಹಾಕಿ. ನಿಮ್ಮ ಮತಗಳು ಅವರ ಓಲೈಕೆಯ ರಾಜಕಾರಣವನ್ನು ಖಬರಸ್ಥಾನದಲ್ಲಿ ಹೂತುಹಾಕಲಿವೆ.

Advertisement

Udayavani is now on Telegram. Click here to join our channel and stay updated with the latest news.

Next