ಹೊಸದಿಲ್ಲಿ : ”ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ನಾನು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಜನಲಾಭ ಕೇಂದ್ರೀಕೃತ ರಾಜಕಾರಣವನ್ನು ನಾನು ಬಯಸುತ್ತೇನೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸೋಮವಾರ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಯನ್ನು ಉದ್ದೇಶಿಸಿ ಹೇಳಿದರು.
ಪಕ್ಷದ ನಾಯಕರು, ಕಾರ್ಯಕರ್ತರು ಪಕ್ಷಕ್ಕಿಂತ ದೇಶವೇ ಮೊದಲು ಎನ್ನುವ ರೀತಿಯಲ್ಲಿ ದೇಶಕ್ಕಾಗಿ ಮತ್ತು ದೇಶದ ಸಮಸ್ತ ಜನರಿಗಾಗಿ ಸೇವಾ ತತ್ಪರರಾಗಬೇಕು ಎಂದು ಮೋದಿ ಪಕ್ಷೀಯರಿಗೆ ಕರೆ ನೀಡಿದರು.
ಕೇಂದ್ರ ವಿತ್ತ ಸಚಿವ ಅರುಣ್ ಜೇತ್ಲಿ ಅವರು ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿ, “ಪ್ರಧಾನಿ ಮೋದಿ ಅವರ ಭಾಷಣದ ಮುಖ್ಯ ಸಾರವೆಂದರೆ “ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಭಾರತೀಯ ಜನತಾ ಪಕ್ಷವನ್ನು ಚುನಾವಣೆಯ ಆಚೆಗೆ ಕೊಂಡೊಯ್ಯಬೇಕು ಮತ್ತು ಪಕ್ಷವನ್ನು ಜನಸಮೂಹ ಪಾಲ್ಗೊಳ್ಳುವಿಕೆಯ ವೇದಿಕೆಯನ್ನಾಗಿ ಮಾಡಬೇಕು’ ಎಂದು ಹೇಳಿದರು.
“ಸಾರ್ವಜನಿಕರ ಭಾಗೀದಾರಿಕೆ, ಜನ ಜೀವನ ಗುಣಮಟ್ಟ ಸುಧಾರಣೆ – ಇದು ಪ್ರಧಾನಿಯವರು ತಮ್ಮ ಭಾಷಣದಲ್ಲಿ ಒತ್ತು ನೀಡಿರುವ ವಿಷಯಗಳಾಗಿವೆ’ ಎಂದು ಜೇತ್ಲಿ ಹೇಳಿದರು.
ಭಯೋತ್ಪಾದನೆ ಮತ್ತು ಭ್ರಷ್ಟಾಚಾರ ವಿರುದ್ಧದ ಹೋರಾಟವನ್ನು ಮುಂದುವರೆಸುವ ಭರವಸೆಯನ್ನು ಪ್ರಧಾನಿ ನೀಡಿದ್ದಾರೆ; ಸರಕಾರದ ವಿರುದ್ಧ ದೋಷಾರೋಪ ಮಾಡುವುದಕ್ಕೆ ಯಾವುದೇ ರೀತಿಯ ಕಠಿನ ಭಾಷಾ ಪ್ರಯೋಗ ಪರ್ಯಾಯವಾಗದು ಎಂದು ಮೋದಿ ಹೇಳಿರುವುದಾಗಿ ಜೇತ್ಲಿ ತಿಳಿಸಿದರು.
“ದೇಶದಲ್ಲಿ ಬೇರೆ ಯಾವುದೇ ರಾಜಕೀಯ ಪಕ್ಷ ಬಿಜೆಪಿಯಷ್ಟು ಸಕ್ರಿಯವಾಗಿಲ್ಲ; ಪ್ರಜಾಸತ್ತೆಯನ್ನು ಚುನಾವಣೆಯ ಆಚೆಗೆ ನೋಡಬೇಕಾಗಿದೆ’ ಎಂದು ಮೋದಿ ಹೇಳಿರುವುದಾಗಿ ಜೇತ್ಲಿ ತಿಳಿಸಿದರು.