ಕೊಚ್ಚಿ: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆ ವೇಳೆಗೆ ಕೇರಳದಲ್ಲಿ ಬಿಜೆಪಿಯ ಪ್ರಾಬಲ್ಯವನ್ನು ಹೆಚ್ಚಿಸಬೇಕೆಂಬ ಉದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು “ದೇವರೊಲಿದ ನಾಡಿಗೆ’ ಎಂಟ್ರಿ ಕೊಟ್ಟಿದ್ದಾರೆ.
ಸೋಮವಾರದಿಂದ 2 ದಿನ ಕೇರಳದಾದ್ಯಂತ ಮೋದಿ ಸಂಚಲನ ಮೂಡಿಸಲಿದ್ದಾರೆ. ಸೋಮವಾರ ಸಂಜೆ 5 ಗಂಟೆಗೆ ಕೊಚ್ಚಿಗೆ ಆಗಮಿಸಿದ ಮೋದಿ ಅವರು, ಸುಮಾರು 2 ಕಿ.ಮೀ. ದೂರದವರೆಗೆ ರೋಡ್ ಶೋ ನಡೆಸಿದರು. ಈ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಾವಿರಾರು ಮಂದಿ ಪುಷ್ಪವೃಷ್ಟಿ ಸುರಿಸಿ, “ಮೋದಿ ಮೋದಿ’ ಎಂದು ಘೋಷಣೆ ಕೂಗುತ್ತಾ ಸ್ವಾಗತಿಸಿದರು.
ತದಅನಂತರ “ಯುವಮ್ 2023 ಸಮಾವೇಶ’ದ ಸ್ಥಳಕ್ಕೆ ಬಂದ ಮೋದಿಯವರು ಅಲ್ಲಿ ಸೇರಿದ್ದ ಯುವ ಜನರನ್ನು ಉದ್ದೇಶಿಸಿ ಮಾತನಾಡಿದರು. “ಒಂದು ಕಾಲದಲ್ಲಿ ಭಾರತವು “ಐದು ದುರ್ಬಲ’ ರಾಷ್ಟ್ರಗಳ ಪೈಕಿ ಒಂದಾಗಿತ್ತು. ಆದರೆ, ಇಂದು ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಇದಕ್ಕೆ ಕಾರಣ ನಮ್ಮ ಯುವಜನಾಂಗ. ಇದೇ ಕಾರಣಕ್ಕಾಗಿ ನಾನು ನಮ್ಮ ದೇಶದ ಯುವಜನರ ಮೇಲೆ ಬಲವಾದ ನಂಬಿಕೆ ಇಟ್ಟಿದ್ದೇನೆ’ ಎಂದರು. ಇಂದು ಎಲ್ಲರೂ 21ನೇ ಶತಮಾನವು “ಭಾರತದ ಶತಮಾನ’ ಎಂದು ಎಲ್ಲರೂ ಹೇಳುತ್ತಿದ್ದಾರೆ. ನಮ್ಮ ದೇಶದಲ್ಲಿ ಯುವ ಶಕ್ತಿಯ ಖಜಾನೆಯೇ ಇದೆ. ಬಿಜೆಪಿ ಮತ್ತು ಯುವಜನತೆಯು ಸಮಾನ ಮನೋ ಧರ್ಮವನ್ನು ಹೊಂದಿದೆ. ಬಿಜೆಪಿಯು ಸುಧಾರಣೆಯನ್ನು ತರುತ್ತದೆ, ಯುವಜನಾಂಗವು ಫಲಿತಾಂಶವನ್ನು ತರುತ್ತದೆ. ಹಿಂದೆಲ್ಲ ಜನರು, ಭಾರತವನ್ನು ಬದಲಿಸಲು ಯಾವುದರಿಂದಲೂ ಸಾಧ್ಯವಿಲ್ಲ ಎನ್ನುತ್ತಿದ್ದರು. ಆದರೆ, ಈಗ ನಮ್ಮ ದೇಶವು ಇಡೀ ಜಗತ್ತನ್ನೇ ಬದಲಿಸುವ ಶಕ್ತಿ ಹೊಂದಿದೆ ಎಂದೂ ಮೋದಿ ಹೇಳಿದರು.
ಹಿಂದಿನ ಸರಕಾರ ಗಳು ಭ್ರಷ್ಟಾಚಾರಕ್ಕೆ ಹೆಸರಾಗಿ ದ್ದವು. ಆದರೆ ಬಿಜೆಪಿ ಸರಕಾರ ಯುವಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಸಿಆರ್‌ಪಿಎಫ್ ಪರೀಕ್ಷೆ ಯನ್ನು ಮಲಯಾಳ ಸಹಿತ 13 ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ ಕಲ್ಪಿಸಿದ್ದನ್ನು ಇದಕ್ಕೆ ಉದಾ ಹರಣೆಯಾಗಿ ನೀಡಿದರು.
ಹಲವು ಯೋಜನೆಗಳ ಉದ್ಘಾಟನೆ: 2 ದಿನಗಳ ಭೇಟಿ ಯಲ್ಲಿ ಪ್ರಧಾನಿ ಮೋದಿ ಅವರು ದೇಶದ ಮೊದಲ ಡಿಜಿಟಲ್ ಸೈನ್ಸ್ ಪಾರ್ಕ್, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು, ವಾಟರ್ ಮೆಟ್ರೋ ಉದ್ಘಾಟನೆ ಸೇರಿದಂತೆ ರಾಜ್ಯಾದ್ಯಂತ ಹಲವು ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ, ಉದ್ಘಾಟನೆ ನೆರವೇರಿಸಲಿದ್ದಾರೆ.
8 ಬಿಷಪ್‌ಗಳ ಭೇಟಿ: ಕೇರಳದ ಕ್ರಿಶ್ಚಿಯನ್ ಪಾರ್ಟಿ ಎಂದೇ ಕರೆಯಲ್ಪಡುತ್ತಿದ್ದ “ಕೇರಳ ಕಾಂಗ್ರೆಸ್ ಪಕ್ಷ’ವು ಇತ್ತೀಚಿನ ವರ್ಷಗಳಲ್ಲಿ ದುರ್ಬಲವಾಗಿದ್ದು, ಅದರ ಲಾಭವನ್ನು ಪಡೆಯಲು ಬಿಜೆಪಿ ಮುಂದಾಗಿದೆ. ಇದೇ ಸಂದರ್ಭವನ್ನು ಬಳಸಿಕೊಂಡು ರಾಜ್ಯದ ಕ್ರಿಶ್ಚಿಯನ್ ಮತದಾರರನ್ನು ತನ್ನತ್ತ ಸೆಳೆಯುವುದು ಬಿಜೆಪಿಯ ಲೆಕ್ಕಾಚಾರ. ಈ ಕಾರ್ಯತಂತ್ರದ ಭಾಗವಾಗಿ ಇತ್ತೀಚೆಗಷ್ಟೇ “ಸ್ನೇಹಯಾತ್ರೆ’ಯ ಹೆಸರಲ್ಲಿ ಈಸ್ಟರ್ ಹಬ್ಬ ದಂದು ರಾಜ್ಯದ ಬಿಜೆಪಿ ನಾಯಕರು ಬಿಷಪ್‌ಗ್ಳ, ಕ್ರಿಶ್ಚಿಯನ್ನರ ಮನೆಗಳಿಗೆ ಭೇಟಿ ನೀಡಿದ್ದರು. ಈಗ ಮೋದಿಯವರೂ 8 ವಿವಿಧ ಚರ್ಚ್‌ಗಳ ಬಿಷಪ್ ಗಳನ್ನು ಭೇಟಿಯಾಗಲಿದ್ದಾರೆ. ಕಳೆದ ಕೇರಳ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಯು ಶೇ.12.4ರಷ್ಟು ಮತ ಗಳನ್ನು ಪಡೆದಿತ್ತಾದರೂ 1 ಕ್ಷೇತ್ರವನ್ನೂ ಗೆದ್ದಿರಲಿಲ್ಲ.
ಮುಂಡು ಧರಿಸಿ ಬಂದರು ಮೋದಿ!
ಕೇರಳ ಭೇಟಿ ವೇಳೆ ಮೋದಿ ಅವರು ರಾಜ್ಯದ ಸಾಂಪ್ರದಾಯಿಕ ಕಸವು ಮುಂಡು ಹಾಗೂ ಕುರ್ತಾ ಧರಿಸಿ, ಹೆಗಲಿಗೆ ಶಾಲು ಹಾಕಿಕೊಂಡಿದ್ದರು. ಕೇಂದ್ರದ ಮಾಜಿ ರಕ್ಷಣಾ ಸಚಿವ ಎ.ಕೆ.ಆ್ಯಂಟನಿ ಪುತ್ರ ಅನಿಲ್, ರಾಜ್ಯಸಭೆಯ ಮಾಜಿ ಸದಸ್ಯ, ನಟ ಸುರೇಶ್ ಗೋಪಿ, ನಟರಾದ ಉನ್ನಿ ಮುಕುಂದನ್, ಅಪರ್ಣಾ ಬಾಲಮುರಳಿ ಸೇರಿ ಕೆಲವು ಸೆಲೆಬ್ರಿಟಿಗಳೂ ಮೋದಿಯನ್ನು ಸ್ವಾಗತಿಸಿದ್ದು ಕಂಡುಬಂತು.