Advertisement

ಮಹಾಬಲಿಪುರಂ ಸಾಗರಕ್ಕೆ ಪ್ರಧಾನಿ ಮೋದಿ ಅಕ್ಷರ ನಮನ

10:30 AM Oct 15, 2019 | sudhir |

ಹೊಸದಿಲ್ಲಿ: ಮಹಾಬಲಿಪುರಂನಲ್ಲಿ ನಡೆದ ಚೀನ ಜತೆಗಿನ ಅನೌಪಚಾರಿಕ ಶೃಂಗಸಭೆಯ ಎರಡನೇ ದಿನ ಸಮುದ್ರದೊಂದಿಗೆ ಮುಖಾಮುಖೀ ಯಾಗಿದ್ದ ಪ್ರಧಾನಿ ನರೇಂದ್ರ ಮೋದಿ, ಆ ಸಂದರ್ಭದಲ್ಲಿ ಆ ವಿಶಾಲ ಸಾಗರದ ಬಗ್ಗೆ ತಮ್ಮಲ್ಲಿ ಮೂಡಿದ್ದ ಭಾವನೆಗಳೆಲ್ಲವನ್ನೂ ಕವಿತೆಯೊಂದರ ಮೂಲಕ ಕಟ್ಟಿಕೊಟ್ಟಿದ್ದಾರೆ.

Advertisement

ಹಿಂದಿಯಲ್ಲಿ ಎಂಟು ಪ್ಯಾರಾಗಳಲ್ಲಿ ಬರೆದಿರುವ ಆ ಕವಿತೆಯನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿರುವ ಅವರು, “”ಶನಿವಾರದಂದು, ಆ ವಿಶಾಲ ಸಾಗರ ತೀರದಲ್ಲಿ ಅಡ್ಡಾಡುತ್ತಾ, ಪ್ಲಾಸ್ಟಿಕ್‌ ತ್ಯಾಜ್ಯ ಹೆಕ್ಕುತ್ತಿದ್ದಾಗ ಮಾನಸಿಕವಾಗಿ ನಾನು ನನ್ನ ಮುಂದಿದ್ದ ಮಹಾ ಸಾಗರದೊಂದಿಗೆ ಭಾವನಾತ್ಮಕ ವಾಗಿ ಲೀನವಾಗಿದ್ದೆ. ಆ ಭಾವುಕತೆಯ ಸಮ್ಮಿಲನವೇ ನನ್ನಲ್ಲಿ ಕವಿತೆಯೊಂದಕ್ಕೆ ಪ್ರೇರಣೆ ನೀಡಿತು” ಎಂದಿದ್ದಾರೆ.

“ಹೇ ಸಾಗರ್‌… ತುಝೇ ಮೇರಾ ಪ್ರಣಾಮ್‌’ ಎಂದು ಶುರುವಾಗುವ ಆ ಕವಿತೆಯಲ್ಲಿ, “ಮಹಾ ಸಮುದ್ರವೇ, ನಿನ್ನೊಂದಿಗಿನ ನನ್ನೀ ಮಾತುಕತೆಯು ನನ್ನ ಆಂತರ್ಯದ ಪ್ರತೀಕ. ನನ್ನ ಮನಸ್ಸಿನ ಭಾವನೆಗಳನ್ನು ಈ ಕವಿತೆಯ ಮೂಲಕ ನಿನ್ನೊಂದಿಗೆ ಹಂಚಿಕೊಳ್ಳುತ್ತಿದ್ದೇನೆ’ ಎಂದು ಹೇಳಿದ್ದಾರೆ. ಪ್ರಕೃತಿ, ಮನುಷ್ಯ ಮತ್ತು ಸಕಲ ಜೀವರಾಶಿಗಳಿಗೆ ಇರುವ ನಂಟನ್ನು ಎಳೆಎಳೆಯಾಗಿ ಬಿಚ್ಚಿಟ್ಟಿರುವ ಅವರು, ಪ್ರಕೃತಿಗೆ ಧನ್ಯವಾದ ಅರ್ಪಿಸಿದ್ದಾರೆ.

ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಿದ ಮೋದಿ!
ಶನಿವಾರ ಮುಂಜಾನೆ, ಮಹಾಬಲಿಪುರಂನ ಸಮುದ್ರ ತೀರದಲ್ಲಿ ವಾಯು ವಿಹಾರಕ್ಕೆ ತೆರಳಿದ್ದಾಗ ಮೋದಿಯವರು, ಡಂಬಲ್ಸ್‌ (ಕೈಗಳ ವ್ಯಾಯಾಮಕ್ಕೆ ಬಳಸಲು ಪರಿಕರ)ಮಾದರಿ ಸಾಮಗ್ರಿಯನ್ನು ಕೈಯಲ್ಲಿ ಹಿಡಿದು ಎರಡೂ ಹಸ್ತಗಳ ಮಧ್ಯೆ ಅದನ್ನಿಟ್ಟುಕೊಂಡು ಹಸ್ತಗಳನ್ನು ಉಜ್ಜಿಕೊಂಡಿದ್ದರು. ಇದು ಹಲವರ ಕುತೂಹಲಕ್ಕೆ ಕಾರಣವಾಗಿ, ಹಲವಾರು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ “ಆ ಪರಿಕರ ಯಾವುದು’ ಎಂದು ಕೇಳಿದ್ದರು. ರವಿವಾರ, ನೆಟ್ಟಿಗರ ಕುತೂಹಲವನ್ನು ತಣಿಸಿರುವ ಮೋದಿ, ಆ ಸಾಮಗ್ರಿಯ ಬಗ್ಗೆ ವಿವರಣೆ ನೀಡಿದ್ದಾರೆ. ಅದೊಂದು ಆಕ್ಯುಪ್ರಶರ್‌ ರೋಲರ್‌. ಅದನ್ನು ಆಗಾಗ ನಾನು ಉಪಯೋಗಿಸುತ್ತಿರುತ್ತೇನೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next