ಹ್ಯೂಸ್ಟನ್: ಅಮೇರಿಕಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿಯನ್ನು ಹೌಸ್ಟನ್ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಹೂಗುಚ್ಛ ನೀಡಿ ಬರಮಾಡಿಕೊಂಡಿದ್ದು, ಈ ವೇಳೆ ಮೋದಿ ಮೆರೆದ ಸರಳತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಒಂದು ವಾರಗಳ ಅಮೇರಿಕಾ ಪ್ರವಾಸದಲ್ಲಿರುವ ಮೋದಿ ಇಂದು ಹ್ಯೂಸ್ಟನ್ ಜಾರ್ಜ್ ಬುಷ್ ಇಂಟರ್ ಕಾಂಟಿನೆಂಟಲ್ ಏರ್ ಪೋರ್ಟ್ ಗೆ ಬಂದಿಳಿದಿದ್ದರು. ಈ ವೇಳೆ ಭಾರತದಲ್ಲಿನ ಅಮೇರಿಕಾ ರಾಯಭಾರಿ ಕೆನ್ನೆತ್ ಜಸ್ಟರ್, ಅಮೆರಿಕಾದಲ್ಲಿನ ಭಾರತದ ರಾಯಭಾರಿ ಹರ್ಷವರ್ಧನ್ ಶ್ರಿಂಗಾಲಾ ಮತ್ತಿತರ ಅಧಿಕಾರಿಗಳು ಹೂಗುಚ್ಛ ನೀಡುವ ಮೂಲಕ ಸ್ವಾಗತಿಸಿದರು.
ವಿಮಾನದಿಂದ ಇಳಿದು, ತಮ್ಮನ್ನು ಸ್ವಾಗತಿಸಲು ನಿಂತಿದ್ದ ಭಾರತೀಯ ಮತ್ತು ಅಮೇರಿಕಾ ಆಧಿಕಾರಿಗಳಿಗೆ ಹಸ್ತಲಾಘವ ನೀಡುತ್ತಾ ಬರುತ್ತಿದ್ದ ವೇಳೆ ಮಹಿಳಾ ಅಧಿಕಾರಿಯೋರ್ವರು ಹೂಗುಚ್ಛ ನೀಡಿದರು. ಈ ವೇಳೆ ಹೂಗುಚ್ಛದ ಸಣ್ಣ ಭಾಗವೊಂದು ತುಂಡಾಗಿ ಕೆಂಪು ಹಾಸಿನ ಮೇಲೆ ಬಿದ್ದಿತು. ತಕ್ಷಣವೇ ಪ್ರಧಾನಿ ಮೋದಿ ಅವುಗಳನ್ನು ಎತ್ತಿಕೊಂಡು ಭದ್ರತಾ ಸಿಬ್ಬಂದಿಯವರಿಗೆ ನೀಡಿ, ಅಧಿಕಾರಿಗಳನ್ನು ಪರಿಚಯಿಸಿಕೊಳ್ಳುವ ಪ್ರಕ್ರಿಯೆ ಮುಂದುವರಿಸಿದರು. ಈ ಸರಳತೆಗೆ ಹಲವಾರು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು ವಿಡಿಯೋ ವೈರಲ್ ಆಗುತ್ತಿದೆ.
ಇಂದು ಹ್ಯೂಸ್ಟನ್ ನ ಎನ್ ಆರ್ ಜಿ ಸ್ಟೇಡಿಯಂ ನಲ್ಲಿ ನಡೆಯಲಿರುವ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ 50 ಸಾವಿರಕ್ಕೂ ಹೆಚ್ಚು ಅನಿವಾಸಿ ಭಾರತೀಯರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಭಾಗವಹಿಸುತ್ತಿರುವುದು ವಿಶೇಷ.