ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ 67 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಗಾಂಧಿನಗರದಲ್ಲಿ ತಾಯಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಮೋದಿ ಕೆವಾಡಿಯಲ್ಲಿ ಸರ್ದಾರ್ ಸರೋವರ ಅಣೆಕಟ್ಟನ್ನು ದೇಶಕ್ಕೆ ಸಮರ್ಪಿಸಿದರು. ಮಂತ್ರ ಘೋಷಗಳ ವಿಧಿ ವಿಧಾನಗಳೊಂದಿಗೆ, ಬಾಗಿನ ನೀಡುವ ಮೂಲಕ ಡ್ಯಾಂ ಲೋಕಾರ್ಪಣೆಗೊಳಿಸಿದರು. ವಿಶ್ವಕರ್ಮ ಜಯಂತಿಯ ಸುಸಂದರ್ಭದಲ್ಲಿ ಡ್ಯಾಂ ಲೋಕಾರ್ಪಣೆ ಮಾಡಲಾಗಿದ್ದು ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ನರ್ಮದಾ ನದಿಗೆ ಅಡ್ಡಲಾಗಿ ನಿರ್ಮಾಣಗೊಂಡಿರುವ ಈ ಅಣೆಕಟ್ಟಿಗೆ 1961ರ ಏ.6ರಂದು ಅಂದಿನ ಪ್ರಧಾನಿ ದಿ.ಜವಾಹರ್ ಲಾಲ್ ನೆಹರೂ ಶಿಲಾನ್ಯಾಸ ನೆರವೇರಿಸಿದ್ದರು. ಹೀಗಾಗಿ 56ವರ್ಷಗಳ ಬಳಿಕ ಈ ಅಣೆಕಟ್ಟು ಉದ್ಘಾಟನೆಯಾಗಿದೆ.ಈ ಯೋಜನೆಗೆ ಪರಿಸರವಾದಿ ಮೇಧಾ ಪಾಟ್ಕರ್ ನೇತೃತ್ವದಲ್ಲಿ ಭಾರಿ ಹೋರಾಟವೂ ನಡೆದಿತ್ತು. ವಿಶ್ವದಲ್ಲೇ 2 ನೇ ಅತೀ ದೊಡ್ಡ ಡ್ಯಾಂ ಇದಾಗಿದೆ.
ಪ್ರಧಾನಿ ಮೋದಿ ಎರಡು ದಿನಗಳ ಹಿಂದಷ್ಟೇ ಬುಲೆಟ್ ಟ್ರೈನ್ ಯೋಜನೆ ಶಿಲಾನ್ಯಾಸಕ್ಕೆ ತವರು ರಾಜ್ಯಕ್ಕೆ ಆಗಮಿಸಿದ್ದರು.
ಪಕ್ಷದ ಪರಮೋಚ್ಛ ನಾಯಕನ ಜನ್ಮ ದಿನವನ್ನು “ಸೇವಾ ದಿವಸ’ವನ್ನಾಗಿ ಬಿಜೆಪಿ ಆಚರಿಸುತ್ತಿದ್ದು , ದೇಶಾದ್ಯಂತ ಸ್ವಚ್ಛತಾ ಆಂದೋಲನ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.