ಹೊಸದಿಲ್ಲಿ: ಮಣಿಪುರದಲ್ಲಿ ಹಿಂಸಾಚಾರ ಉಲ್ಬಣಗೊಂಡಿದ್ದು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರನ್ನು ಕೂಡಲೇ ವಜಾಗೊಳಿಸಬೇಕು ಮತ್ತು ಸೂಕ್ಷ್ಮ ಭದ್ರತಾ ಪರಿಸ್ಥಿತಿಯ ಸಂಪೂರ್ಣ ಜವಾಬ್ದಾರಿಯನ್ನು ಕೇಂದ್ರ ಸರಕಾರ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ಸೋಮವಾರ ಒತ್ತಾಯಿಸಿದೆ.ಸುಪ್ರೀಂ ಕೋರ್ಟ್ ಆದೇಶದ ಮಣಿಪುರ ತನಿಖಾ ಆಯೋಗವು ತನ್ನ ತನಿಖೆಯನ್ನು ತ್ವರಿತಗೊಳಿಸಬೇಕು ಎಂದು ಹೇಳಿದೆ.
ಮಣಿಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೀನಾಯ ವೈಫಲ್ಯವನ್ನು ಕ್ಷಮಿಸಲು ಸಾಧ್ಯವಾಗದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ (ಸೆ9) ಎಕ್ಸ್ ಪೋಸ್ಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.
ಶನಿವಾರ ಜಿರಿಬಾಮ್ ಜಿಲ್ಲೆಯಲ್ಲಿ ಕನಿಷ್ಠ ಐವರು ಸಾವನ್ನಪ್ಪಿದ ತಾಜಾ ಹಿಂಸಾಚಾರ ವರದಿಯ ಬಳಿಕ ವಿಪಕ್ಷದ ಪ್ರತಿಕ್ರಿಯೆ ಇದದಾಗಿದೆ. ಪೊಲೀಸರ ಪ್ರಕಾರ, ಉಗ್ರರು ವ್ಯಕ್ತಿಯ ಮನೆಗೆ ನುಗ್ಗಿ ನಿದ್ದೆಯಲ್ಲಿದ್ದಾಗಲೇ ಗುಂಡಿಕ್ಕಿ ಹತ್ಯೆಗೈದಿದ್ದಾರೆ. ನಂತರ ಸಮುದಾಯಗಳ ನಡುವೆ ಭಾರೀ ಗುಂಡಿನ ಚಕಮಕಿ ನಡೆದು ನಾಲ್ಕು ಶಸ್ತ್ರಸಜ್ಜಿತ ವ್ಯಕ್ತಿಗಳ ಸಾವಿಗೆ ಕಾರಣವಾಗಿದೆ.
”ಮಣಿಪುರದ ಮಾಜಿ ರಾಜ್ಯಪಾಲರಾದ ಅನುಸೂಯಾ ಉಯಿಕೇ ಮಣಿಪುರದ ಜನರ ಧ್ವನಿಯನ್ನು ಪ್ರತಿಧ್ವನಿಸಿದ್ದಾರೆ. ಕಲಹ ಪೀಡಿತ ರಾಜ್ಯದ ಜನರು ಅಸಮಾಧಾನಗೊಂಡಿದ್ದಾರೆ ಮತ್ತು ದುಃಖಿತರಾಗಿದ್ದಾರೆ, ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಬೇಕೆಂದು ಅವರು ಬಯಸಿದ್ದರು. ಕಳೆದ 16 ತಿಂಗಳುಗಳಲ್ಲಿ, ಪ್ರಧಾನಿ ಮೋದಿ ಮಣಿಪುರದಲ್ಲಿ ಒಂದೇ ಒಂದು ಸೆಕೆಂಡ್ ಸಮಯ ಕಳೆದಿಲ್ಲ, ರಾಜ್ಯದಲ್ಲಿ ಹಿಂಸಾಚಾರ ಅಡೆತಡೆಯಿಲ್ಲದೆ ಮುಂದುವರೆದಿದ್ದು ಜನರು ಮೋದಿ ಮತ್ತು ಶಾ ಅವರ ಸಹಭಾಗಿತ್ವದ ಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ” ಕಿಡಿ ಕಾರಿದ್ದಾರೆ.
“ಮಣಿಪುರದ ಬಿಜೆಪಿ ಸಿಎಂ ತಮ್ಮ ದರ್ಜೆಯ ಅಸಮರ್ಥತೆಯನ್ನು ನಾಚಿಕೆಯಿಲ್ಲದೆ ಹೊರಹಾಕುವಲ್ಲಿ ದಾಖಲೆ ನಿರ್ಮಿಸಿದ್ದಾರೆ, ಅವರು ಏಕೀಕೃತ ಕಮಾಂಡ್ ಅನ್ನು ರಾಜ್ಯ ಸರಕಾರಕ್ಕೆ ವರ್ಗಾಯಿಸಿದ್ದಾರೆ” ಎಂದು ಖರ್ಗೆ ಆಕ್ರೋಶ ಹೊರ ಹಾಕಿದ್ದಾರೆ.
“ಪ್ರಧಾನಿ ಅವರಂತೆಯೇ, ಕೇಂದ್ರ ಗೃಹ ಸಚಿವರೂ ಸಹ ಮಣಿಪುರದಲ್ಲಿ ಭದ್ರತೆಯನ್ನು ಖಾತ್ರಿಪಡಿಸುವ ತಮ್ಮ ಸಾಂವಿಧಾನಿಕ ಜವಾಬ್ದಾರಿಯನ್ನು ಬಿಟ್ಟುಕೊಟ್ಟಿದ್ದಾರೆ ಮತ್ತು ರಾಜ್ಯಗಳ ಚುನಾವಣೆಗಳಲ್ಲಿ ರ್‍ಯಾಲಿಗಳನ್ನು ಉದ್ದೇಶಿಸಿ ರಾಜಕೀಯ ಮತ್ತು ಭಾಷಣದಲ್ಲಿ ನಿರತರಾಗಿದ್ದಾರೆ” ಎಂದು ಖರ್ಗೆ ಕಿಡಿ ಕಾರಿದ್ದಾರೆ.