ನವದೆಹಲಿ: ನಾವು ಪಾಕಿಸ್ತಾನದ ವಿಚಾರವಾಗಿ ಹೆಚ್ಚು ಚರ್ಚಿಸಿದ್ದೇವೆ. ಪಾಕಿಸ್ತಾನ ಉಗ್ರರನ್ನು ಮಟ್ಟ ಹಾಕಬೇಕು ಎಂಬುದು ನಮ್ಮ ಒತ್ತಡ. ಆದರೆ ಸಿಎಎ ಬಗ್ಗೆ ನಾನು ಚರ್ಚೆ ನಡೆಸಿಲ್ಲ. ದಿಲ್ಲಿ ಹಿಂಸಾಚಾರ ಭಾರತದ ಆಂತರಿಕ ವಿಚಾರ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಮಂಗಳವಾರ ಸಂಜೆ ಅಮೆರಿಕಕ್ಕೆ ತೆರಳುವ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿಎಎ ಬಗ್ಗೆ ಮಾತನಾಡಬೇಕಾದ ಅಗತ್ಯವಿಲ್ಲ. ಸಿಎಎ ಭಾರತದ ವಿಚಾರ. ಪ್ರಧಾನಿ ನರೇಂದ್ರ ಮೋದಿ ದಿಟ್ಟ ನಾಯಕರಾಗಿದ್ದಾರೆ ಎಂದು ಶ್ಲಾಘಿಸಿದರು.
ನಾವು ಭಾರತದಲ್ಲಿರುವ ಮುಸ್ಲಿಮರ ಬಗ್ಗೆ ಮಾತನಾಡಿದ್ದೇವೆ. ಧಾರ್ಮಿಕ ಸ್ವಾತಂತ್ರ್ಯದ ಕುರಿತು ಚರ್ಚಿಸಿದ್ದೇವೆ. ಪ್ರಧಾನಿ ಮೋದಿ ಧಾರ್ಮಿಕ ಸ್ವಾತಂತ್ರ್ಯದ ಪರವಾಗಿದ್ದಾರೆ. ಹೀಗಾಗಿ ಭಾರತದ ಆಂತರಿಕ ವಿಚಾರಗಳ ಬಗ್ಗೆ ಚರ್ಚಿಸಿಲ್ಲ ಎಂದರು.
ಆದರೆ ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಟ್ರಂಪ್ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ತಮ್ಮ ಸಮಸ್ಯೆಗಳ ಇತ್ಯರ್ಥದ ಬಗ್ಗೆ ಕಾರ್ಯೋನ್ಮುಖವಾಗಲಿ. ಉಭಯ ದೇಶಗಳ ಪ್ರಧಾನಿ ಜತೆ ನನ್ನ ಸ್ನೇಹವಿದೆ. ಹೀಗಾಗಿ ಮಧ್ಯಸ್ಥಿಕೆ ವಹಿಸಬೇಕಾದ ಅಗತ್ಯಬಿದ್ದರೆ ನಾನು ಸಿದ್ದನಿದ್ದೇನೆ ಎಂದು ತಿಳಿಸಿದ್ದಾರೆ.