ನವದೆಹಲಿ: “ಆಗಸ್ಟ್ 13ರಿಂದ 15ರವರೆಗೆ ನಿಮ್ಮ ನಿಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ. ಆ ಮೂಲಕ “ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಶಕ್ತಿ ತುಂಬಿ…’
ಇದು ದೇಶವಾಸಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಮನವಿ. ಶುಕ್ರವಾರ ಈ ಕುರಿತು ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು, “ಪ್ರತಿ ಮನೆಯಲ್ಲೂ ತ್ರಿವರ್ಣಧ್ವಜ ಎಂಬ ಈ ಅಭಿಯಾನವು ತ್ರಿವರ್ಣ ಧ್ವಜದೊಂದಿಗಿನ ನಮ್ಮ ನಂಟನ್ನು ಮತ್ತಷ್ಟು ಆಳವಾಗಿಸುತ್ತದೆ’ ಎಂದಿದ್ದಾರೆ.
“1947ರ ಜುಲೈ 22ರಂದೇ ದೇಶವು ತ್ರಿವರ್ಣ ಧ್ವಜವನ್ನು ರಾಷ್ಟ್ರೀಯ ಧ್ವಜವನ್ನಾಗಿ ಅಳವಡಿಸಿಕೊಂಡಿತು. ವಸಾಹತುಶಾಹಿ ಆಡಳಿತದ ವಿರುದ್ಧ ಹೋರಾಡುತ್ತಿದ್ದ ಸಂದರ್ಭದಲ್ಲಿ ಸ್ವತಂತ್ರ ಭಾರತದ ರಾಷ್ಟ್ರಧ್ವಜದ ಕನಸು ಕಾಣುತ್ತಿದ್ದ ಹೋರಾಟಗಾರರೆಲ್ಲರ ಧೈರ್ಯ ಮತ್ತು ಶೌರ್ಯವನ್ನು ಸ್ಮರಿಸುವ ದಿನವಿದು. ಅವರ ಕನಸನ್ನು ಸಾಕಾರಗೊಳಿಸುವ ಮತ್ತು ಅವರ ಕನಸಿನ ಭಾರತ ನಿರ್ಮಿಸುವ ಕರ್ತವ್ಯ ನಮ್ಮೆಲ್ಲರದು.
ಹಾಗಾಗಿ, ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಈ ಹೊತ್ತಲ್ಲಿ ನಾವು ಹರ್ ಘರ್ ತಿರಂಗಾ ಅಭಿಯಾನವನ್ನೂ ಬಲಿಷ್ಠಗೊಳಿಸೋಣ. 13ರಿಂದ 15 ಆಗಸ್ಟ್ ನಡುವೆ ನಿಮ್ಮ ನಿಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಅಥವಾ ಪ್ರದರ್ಶಿಸಿ’ ಎಂದು ಭಾರತೀಯರೆಲ್ಲರಿಗೂ ಮೋದಿ ಸಲಹೆ ನೀಡಿದ್ದಾರೆ.
ಈ ಟ್ವೀಟ್‌ನ ಜೊತೆಗೆ, ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಮೊದಲ ತ್ರಿವರ್ಣಧ್ವಜವನ್ನು ಹಾರಿಸಿದ ಚಿತ್ರವನ್ನೂ ಮೋದಿ ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.