ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವಾರವೇ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ಕ್ವಾಡ್ ಶೃಂಗದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೊರೊನಾ, ಲಾಕ್‌ಡೌನ್ ಬಳಿಕ ಅಂತಾರಾಷ್ಟ್ರೀಯ ನಾಯಕರು ವರ್ಚುವಲ್ ಮುಖಾಮುಖೀಯಿಂದ ದೂರ ಸರಿದು, ಖುದ್ದಾಗಿ ಪಾಲ್ಗೊಳ್ಳುತ್ತಿರುವ ಮೊದಲ ಕ್ವಾಡ್ ಶೃಂಗಸಭೆ ಇದಾಗಿದೆ.
ಸೆ.24ರಂದು ನಡೆಯಲಿರುವ ಶೃಂಗದಲ್ಲಿ ಅಫ್ಘಾನ್ ಬಿಕ್ಕಟ್ಟು, ಸಮಕಾಲೀನ ಜಾಗತಿಕ ಸವಾಲುಗಳು, ಕೊರೊನಾ ಸೋಂಕು ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆಯಾಗಲಿದೆ. ಅಮೆರಿಕ ಅಧ್ಯಕ್ಷರಾಗಿ ಜೋ ಬೈಡೆನ್ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಪ್ರಧಾನಿ ಮೋದಿ ಅವರ ಮೊದಲ ಅಮೆರಿಕ ಭೇಟಿ ಇದಾಗಿರಲಿದೆ. ಕ್ವಾಡ್ ರಾಷ್ಟ್ರಗಳ ಒಕ್ಕೂಟದಲ್ಲಿ ಅಮೆರಿಕ, ಭಾರತ, ಜಪಾನ್, ಆಸ್ಟ್ರೇಲಿಯಾ ಇವೆ.
25ಕ್ಕೆ ಮೋದಿ ಭಾಷಣ: 24ರಂದು ನಾಲ್ಕು ರಾಷ್ಟ್ರಗಳ ಕ್ವಾಡ್ ಸಮ್ಮೇಳನದಲ್ಲಿ ಭಾಗಿಯಾದ ಬಳಿಕ, ಮಾರನೇ ದಿನ ಅಂದರೆ ಸೆ.25ರಂದು ನ್ಯೂಯಾರ್ಕ್ನಲ್ಲಿ ಪ್ರಧಾನಿ ಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಲಿದ್ದಾರೆ. ಪ್ರಸಕ್ತ ವರ್ಷದ ಜನರಲ್ ಡಿಬೇಟ್‌ಗೆ “ಕೋವಿಡ್-19ರಿಂದ ಚೇತರಿಸಿಕೊಂಡು ಪುಟಿದೇಳುವುದು, ಸುಸ್ಥಿರತೆಯ ಮರುನಿರ್ಮಾಣ, ಗ್ರಹದ ಅಗತ್ಯತೆಗೆ ಸ್ಪಂದನೆ, ಜನರ ಹಕ್ಕುಗಳಿಗೆ ಗೌರವ, ವಿಶ್ವಸಂಸ್ಥೆಯ ಪುನಶ್ಚೇತನ’ ಎಂಬ ಥೀಮ್ ಅನ್ನು ಹೊಂದಲಾಗಿದ್ದು, ಮೋದಿ ಅವರೂ ಈ ಕುರಿತು ಮಾತನಾಡಲಿದ್ದಾರೆ. ಸೋಂಕು ಇದ್ದರೂ ಜಗತ್ತಿನ 100 ರಾಷ್ಟ್ರಗಳ ಸರಕಾರಿ ಮುಖ್ಯಸ್ಥರು ಪ್ರಸಕ್ತ ಸಾಲಿನಲ್ಲಿ ವಾಷಿಂಗ್ಟನ್ಗೆ ಆಗಮಿಸಿ, ಮಾತನಾಡಲಿದ್ದಾರೆ.
ಮೋದಿ ಬೈಡೆನ್ ಭೇಟಿ :
ವಾಷಿಂಗ್ಟನ್‌ನಲ್ಲಿ ಮೋದಿ ಅವರು ಬೈಡೆನ್ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಜತೆ ಪ್ರತ್ಯೇಕ ಮಾತುಕತೆ ನಡೆಸಲಿದ್ದಾರೆ. ಸೆ.23ರಂದು ಶ್ವೇತಭವನದಲ್ಲಿ ಮೋದಿ-ಬೈಡೆನ್ ಮಾತುಕತೆ ನಡೆಯಲಿದೆ.