Advertisement

ರೈತರಿಗೆ ನೆರವಾದ ಸಂತೃಪ್ತಿ; ಫ‌ಲಾನುಭವಿಗಳ ಜತೆ ಸಂವಾದದಲ್ಲಿ ಪ್ರಧಾನಿ ಮೋದಿ

08:00 AM Jun 01, 2022 | Team Udayavani |

ಶಿಮ್ಲಾ: ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಹತ್ತು ಕೋಟಿ ರೈತರಿಗೆ 21 ಸಾವಿರ ಕೋಟಿ ರೂ. ಮೊತ್ತವನ್ನು ವರ್ಗಾಯಿಸಿರುವುದು ಸಂತೃಪ್ತಿ ತಂದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Advertisement

ಮಂಗಳವಾರ ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಲ್ಲಿ ಪಿಎಂ- ಕಿಸಾನ್‌ ಯೋಜನೆಯಡಿ 11ನೇ ಕಂತಿನ ಮೊತ್ತ ವರ್ಗಾವಣೆ ಮತ್ತು ಕೇಂದ್ರ ಸರಕಾರದ ವಿವಿಧ 16 ಯೋಜನೆಗಳ ಫ‌ಲಾನುಭವಿಗಳ ಜತೆಗೆ ಆನ್‌ಲೈನ್‌ ಸಂವಾದ, ಗರೀಬ್‌ ಕಲ್ಯಾಣ್‌ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಈ ಮಾತುಗಳನ್ನಾಡಿದ್ದಾರೆ.

ಪಿಎಂ ಕೇರ್ ಫಾರ್‌ ಚಿಲ್ಡ್ರನ್‌ ವತಿಯಿಂದ ಕೊರೊನಾ ದಿಂದಾಗಿ ಅನಾಥರಾದ ಮಕ್ಕಳಿಗೆ ಸೂಕ್ತ ಯೋಜನೆ ಯನ್ನು ನೀಡಿದ ಬಗ್ಗೆ ಪ್ರಧಾನಿ ಪ್ರಸ್ತಾವಿಸಿ ಸಂತಸ ವ್ಯಕ್ತಪಡಿಸಿದರು. ದೇಶದ 130 ಕೋಟಿ ಮಂದಿಯ ಸೇವೆ ಮಾಡುವ ಅವಕಾಶ ನೀಡಿದ ಜನರಿಗೆ ಧನ್ಯವಾದ ಅರ್ಪಿಸುವುದಾಗಿ ಹೇಳಿದರು. ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣ ಎಂಬ ಮೂರು ವಿಚಾರಗಳು ಕೇಂದ್ರ ಸರಕಾರದ ಬಗ್ಗೆ ಜನರು ಹೊಂದಿರುವ ಅಭಿಪ್ರಾಯವನ್ನೇ ಬದಲಾಯಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ.

2014ರಲ್ಲಿ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ನಾವು ಬಡವರ ಏಳಿಗೆಗಾಗಿ ಶ್ರಮಿಸುತ್ತಿದ್ದೇವೆ. ನಮ್ಮ ನೇತೃತ್ವದ ಸರಕಾರ ಹೊಸ ಭಾರತದ ನಿರ್ಮಾಣಕ್ಕೆ ಪ್ರಯತ್ನಿಸುತ್ತಿದೆಯೇ ವಿನಾ ವೋಟ್‌ ಬ್ಯಾಂಕ್‌ಗಾಗಿ ಯಾವ ಕೆಲಸವನ್ನೂ ಮಾಡುತ್ತಿಲ್ಲ ಎಂದಿದ್ದಾರೆ.

ತಾರತಮ್ಯ ಅಂತ್ಯ
ಬಡವರನ್ನು ಸಶಕ್ತರನ್ನಾಗಿಸುವುದು ಎಂದರೆ ತುಷ್ಟೀ ಕರಣ, ತಾರತಮ್ಯಗಳನ್ನು ಶತ ಪ್ರತಿಶತ ನಿವಾರಿಸುವುದು, ಇದು ಸರಕಾರದ ಮಂತ್ರ ಎಂದು ಪ್ರಧಾನಿ ಹೇಳಿದ್ದಾರೆ.

Advertisement

ಕಲಬುರಗಿಯ ಮಹಿಳೆಗೆ ಮೋದಿ ರಾಜಕೀಯ ಆಹ್ವಾನ
ಕಲಬುರಗಿ: ನಿಮ್ಮಲ್ಲಿ ನಾಯಕತ್ವ ಗುಣವಿದೆ. ರಾಜಕೀಯಕ್ಕೆ ಬನ್ನಿ. ನಾನು ಕರ್ನಾಟಕ ಬಿಜೆಪಿ ಘಟಕದ ಅಧ್ಯಕ್ಷನಾಗಿದ್ದರೆ ನಿಮಗೆ ಟಿಕೆಟ್‌ ನೀಡಿ ಚುನಾವಣೆಗೆ ನಿಲ್ಲಿಸುತ್ತಿದ್ದೆ!

– ಕಮಲಾಪುರ ತಾಲೂಕಿನ ಕಿಣ್ಣಿ ಸಡಕ್‌ ಗ್ರಾಮದ ಮಹಿಳೆ ಸಂತೋಷಿ ಗಣಪತಿಗೆ ಪ್ರಧಾನಿ ಮೋದಿ ನೀಡಿದ ಆಹ್ವಾನವಿದು. ಮಂಗಳವಾರ ಕೇಂದ್ರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ವೇಳೆ ಸಂತೋಷಿ ಅವರಿಗೆ ಮಾತನಾಡುವ ಅವಕಾಶ ದೊರೆತಿತ್ತು. ಆಯುಷ್ಮಾನ್‌ ಭಾರತ್‌ ಆರೋಗ್ಯ ಕಾರ್ಡ್‌, ಆರೋಗ್ಯ ಮತ್ತು ವೆಲ್‌ನೆಸ್‌ ಸೆಂಟರ್‌ನ ಸೇವೆಯಿಂದ ನನ್ನ ವಯೋವೃದ್ಧ ತಾಯಿಗೆ ಅನುಕೂಲ ವಾಗಿದೆ. ನಮ್ಮೂರಿನಲ್ಲಿ ಆರೋಗ್ಯ ಕಾರ್ಯಕರ್ತರು ಮನೆಗೆ ಬಂದು ಉಚಿತ ತಪಾಸಣೆ ಕೈಗೊಂಡಿದ್ದಲ್ಲದೆ ಅಗತ್ಯ ಔಷಧೋಪಚಾರ ನೀಡಿದ್ದಾರೆ. ತಾಯಿ ಈಗ ಆರೋಗ್ಯ ವಾಗಿದ್ದಾರೆ ಎಂದು ಸಂತೋಷಿ ಅಚ್ಚಗನ್ನಡದಲ್ಲಿ ವಿವರಿಸಿದರು.

ಅವರ ಮಾತು ಆಲಿಸಿದ ಪ್ರಧಾನಿ ಮೋದಿ ನಗುತ್ತ, ನೀವು ಕನ್ನಡದಲ್ಲಿ ಮಾತನಾಡಿದ್ದು ಸಂತೋಷ. ಒಂದು ವೇಳೆ ನಾನು ಕರ್ನಾಟಕದ ರಾಜಕೀಯದಲ್ಲಿರುತ್ತಿದ್ದರೆ ನಿಮ್ಮನ್ನು ಚುನಾವಣೆಗೆ ನಿಲ್ಲಿಸುತ್ತಿದ್ದೆ. ನಿಮಗೆ ಜನನಾಯಕಿ ಆಗುವ ಸಾಮರ್ಥ್ಯವಿದೆ ಎಂದು ಹೊಗಳಿದರು.

ಸಂವಾದದ ಬಳಿಕ ಮಾತನಾಡಿದ ಸಂತೋಷಿ, ಪ್ರಧಾನಿ ಜತೆ ಮಾತನಾಡಿರುವುದು ಖುಷಿ ತಂದಿದೆ. ಜಿಲ್ಲಾಡಳಿತ ಈ ಸುವರ್ಣಾವಕಾಶ ನೀಡಿದೆ. ಬಿಜೆಪಿ ಟಿಕೆಟ್‌ ನೀಡಿದರೆ ಚುನಾವಣೆಯಲ್ಲಿ ಖಂಡಿತ ಸ್ಪರ್ಧಿಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next