ನವದೆಹಲಿ: ಅಂಫಾನ್ ಚಂಡಮಾರುತದ ಆರ್ಭಟಕ್ಕೆ ಭಾರತ ಮತ್ತು ಬಾಂಗ್ಲಾದೇಶದಲ್ಲಿ ಕನಿಷ್ಠ 84 ಜನರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಇಂದು ಪ್ರಧಾನಿ ಮೋದಿ ಪಶ್ಚಿಮ ಬಂಗಾಳ ಮತ್ತು ಒಡಿಶಾ ರಾಜ್ಯಗಳಿಗೆ ಭೇಟಿ ನೀಡಲಿದ್ದು ಅಂಫಾನ್ ಚಂಡಮಾರುತ ಅಪ್ಪಳಿಸಿರುವ ಜಾಗಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.
ಮೇ 22 ರ ಬೆಳಿಗ್ಗೆ 10 ಗಂಟೆಗೆ ಪ್ರಧಾನಿ ಕೋಲ್ಕತ್ತಾಗೆ ಆಗಮಿಸಲಿದ್ದು, ಒಡಿಶಾದ ಭುವನೇಶ್ವರಕ್ಕೆ ಭೇಟಿ ನೀಡುವ ಮೊದಲು ಹೆಲಿಕಾಫ್ಟರ್ ಮೂಲಕ ಬಸಿರ್ಹತ್‌ಗೆ ಪ್ರಯಾಣ ಬೆಳೆಸಲಿದ್ದಾರೆ.
ಕೋಲ್ಕತಾ ಮತ್ತು ಹೌರಾ ಸೇರಿದಂತೆ ಹಲವಾರು ಹಳ್ಳಿಗಳು, ಪಟ್ಟಣಗಳು ಮತ್ತು ನಗರಗಳಲ್ಲಿ ಅಂಫಾನ್ ನಿಂದ ವ್ಯಾಪಕ ಹಾನಿಯಾಗಿದೆ ಎಂದು ವರದಿಯಾಗಿದೆ. ದಶಕದಲ್ಲೇ ಕಂಡು ಕೇಳರಿಯದ ಚಂಡಮಾರುತಕ್ಕೆ ಪಶ್ಚಿಮ ಬಂಗಾಳ ಸಾಕ್ಷಿಯಾಗಿದೆ. ಶಕ್ತಿಶಾಲಿ ಚಂಡಮಾರುತದ ಅಬ್ಬರಕ್ಕೆ ಹಲವಡೆ ಬೇರುಸಹಿತ ಮರಗಳು ಕಿತ್ತುಬಂದಿದ್ದು, ಸೇತುವೆಗಳು ಕೂಡ ಕೊಚ್ಚಿಕೊಂಡು ಹೋಗಿವೆ.
ಅಂಫಾನ್ ಚಂಡಮಾರುತ ಸಂತ್ರಸ್ತರಿಗೆ ಸರ್ಕಾರ ಎಲ್ಲಾ ರೀತಿಯ ಸಹಾಯ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಭರವಸೆ ನೀಡಿದರು. ಈ ಸವಾಲಿನ ಸಂದರ್ಭದಲ್ಲಿ ಇಡೀ ರಾಷ್ಟ್ರವು ಪಶ್ಚಿಮ ಬಂಗಾಳದೊಂದಿಗೆ ಒಗ್ಗಟ್ಟಿನಲ್ಲಿ ನಿಂತಿದೆ. ಮತ್ತು ಅಲ್ಲಿನ ಜನರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಿದೆ ಎಂದಿದ್ದಾರೆ.
ಪ್ರಧಾನಿ ಮೋದಿ ವೈಮಾನಿಕ ಸಮೀಕ್ಷೆ ವೇಳೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಹಾಜರಿರಲಿದ್ದಾರೆ. ಬಳಿಕ ಕೋಲ್ಕತ್ತಾಕ್ಕೆ ಆಗಮಿಸಿ ಮಮತಾ ಬ್ಯಾನರ್ಜಿ ಮತ್ತು ಪಶ್ಚಿಮ ಬಂಗಾಳದ ಹಿರಿಯ ಅಧಿಕಾರಿಗಳೊಂದಿಗೆ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಬಳಿಕ ಒಡಿಶಾ ಗೆ ತೆರಳಲಿರುವ ಪ್ರಧಾನಿ ಮೋದಿ, ಅಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಜೊತೆ ಆ ರಾಜ್ಯದ ಚಂಡಮಾರುತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.