ಹೊಸದಿಲ್ಲಿ: ಬೆಂಗಳೂರಿನ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ನಿರ್ಮಿಸಿದ ಹೆಲಿಕಾಪ್ಟರ್, ಡ್ರೋನ್ಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಸೇನೆಗೆ ಹಸ್ತಾಂತರಿಸಲಿದ್ದಾರೆ.
ಸಮುದ್ರಮಟ್ಟದಿಂದ 5,000 ಅಡಿ ಎತ್ತರದಲ್ಲಿ ಲ್ಯಾಂಡಿಂಗ್ ಹಾಗೂ ಟೇಕಾಫ್ ಆಗಬಲ್ಲ ವಿಶ್ವದ ಏಕೈಕ ಹೆಲಿಕಾಪ್ಟರ್ಗಳು ಇವಾಗಿವೆ.
ಉತ್ತರ ಪ್ರದೇಶದ ಝಾನ್ಸಿಯಲ್ಲಿ ಬುಧವಾರದಿಂದ ಆರಂಭವಾಗಿರುವ ಮೂರು ದಿನಗಳ “ರಾಷ್ಟ್ರ ರಕ್ಷೆಯ ಸಮರ್ಪಣೆಯ ಪರ್ವ’ದ ಕೊನೆಯ ದಿನದಂದು ದೇಶಿಯವಾಗಿ ನಿರ್ಮಾಣಗೊಂಡ ಕಾಪ್ಟರ್ಗಳನ್ನು ಭಾರತೀಯ ವಾಯುಪಡೆ (ಐಎಎಫ್) ಮುಖ್ಯಸ್ಥರಿಗೆ ಹಸ್ತಾಂತರಿಸಲಿದ್ದಾರೆ ಎಂದು ಬುಧವಾರ ಪ್ರಧಾನಮಂತ್ರಿಗಳ ಕಚೇರಿ ತಿಳಿಸಿದೆ.
ದೇಶಿಯ ತಂತ್ರಜ್ಞಾನದಿಂದ ನಿರ್ಮಿಸಲಾಗಿರುವ ಡ್ರೋನ್ ಮತ್ತು ಮಾನವ ರಹಿತ ಯುದ್ಧ ವಿಮಾನಗಳನ್ನು ಭೂಸೇನಾ ಮುಖ್ಯಸ್ಥರಿಗೆ, ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನ ಸಂಸ್ಥೆ (ಡಿಆರ್ಡಿಒ) ನಿರ್ಮಿಸಿದ ಅಡ್ವಾನ್ಸ್ ಎಲೆಕ್ಟ್ರಾನಿಕ್ ವಾರ್ಫೇರ್ ಸೂಟ್ಗಳನ್ನು ನೌಕಾಪಡೆಯ ಮುಖ್ಯಸ್ಥರಿಗೆ ವಿತರಿಸಲಿದ್ದಾರೆ. ಇದರ ಜತೆಗೆ ಉತ್ತರ ಪ್ರದೇಶ ರಕ್ಷ ಣ ಉದ್ಯಮ ಕಾರಿಡಾರ್ ವ್ಯಾಪ್ತಿಯಲ್ಲಿ 400 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಪ್ರಧಾನಿ ಮೋದಿ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಉದ್ಘಾಟನೆ: “ರಾಷ್ಟ್ರ ರಕ್ಷೆಯ ಸಮರ್ಪಣೆಯ ಪರ್ವ’ವನ್ನು ಬುಧವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದರು.
ಸೇನೆಯ ಸರಕು ಸಾಗಣೆ ಶಕ್ತಿ ಪ್ರದರ್ಶನ
ಚೀನ- ಭಾರತ ಗಡಿ ಭಾಗದಲ್ಲಿರುವ ಲಡಾಕ್ನಲ್ಲಿ ಭಾರತೀಯ ಸೇನೆಯು ತನ್ನ ಸರಕು ಸಾಗಣೆ ಶಕ್ತಿ ಪ್ರದರ್ಶನ ಮಾಡಿದೆ. ಭಾರತೀಯ ಸೇನೆ, ವಾಯುಪಡೆ ಜಂಟಿಯಾಗಿ ಈ ಪ್ರದರ್ಶನವನ್ನು ನ.15ರಂದು ನಡೆಸಿದ್ದಾಗಿ ರಕ್ಷಣಾ ಸಚಿವಾಲಯ ಬುಧವಾರ ತಿಳಿಸಿದೆ. ಇಂಟರ್ ಥಿಯೇಟರ್ ಮೂವ್ಮೆಂಟ್, ಸ್ಟಾಂಡ್ ಆಫ್ ಡ್ರಾಪ್ ಸೇರಿ ಅನೇಕ ರೀತಿಯ ಪ್ರದರ್ಶನ ಮಾಡಲಾಗಿದೆ. ಇತ್ತೀಚೆಗೆ ಅದೇ ಪ್ರದೇಶದಲ್ಲಿ ವಾಯುಪಡೆಯ ಶಕ್ತಿ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು.