ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಮಿಳುನಾಡಿನ ರಾಮನಾಥಪುರಂನಿಂದ ಕಣಕ್ಕಿಳಿಯಲಿದ್ದಾರೆಯೇ?
ಬಿಜೆಪಿ ಕೇಂದ್ರ ನಾಯಕತ್ವ ಇಂಥದ್ದೊಂದು ನಿರ್ಧಾರ ಕೈಗೊಂಡರೆ ಮೋದಿಯವರು ರಾಮನಾಥಪುರಂನಲ್ಲಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.
ಭಾನುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಹೈದರಾಬಾದ್‌ನಲ್ಲಿ ನಡೆದ 11 ರಾಜ್ಯಗಳ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿದೆ ಎಂದು ಹೇಳಲಾಗಿದೆ. ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿಯನ್ನು ಬಲಪಡಿಸಬೇಕೆಂದರೆ, ಪ್ರಧಾನಿ ಮೋದಿಯವರು ಇಲ್ಲೇ ಕಣಕ್ಕಿಳಿಯುವುದು ಸೂಕ್ತ ಎಂದು ನಡ್ಡಾ ಅವರೇ ಅಭಿಪ್ರಾಯಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಇಂಡಿಯನ್ ಮುಸ್ಲಿಂ ಲೀಗ್‌ನ ಕೆ. ನವಾಸ್ಕಾನಿ ರಾಮನಾಥಪುರಂ ಸಂಸದರಾಗಿದ್ದಾರೆ. ಒಂದು ವೇಳೆ ಅವರು ಮುಸ್ಲಿಂ ಬಾಹುಳ್ಯದ ರಾಮನಾಥಪುರಂನಲ್ಲಿ ಕಣಕ್ಕಿಳಿದು, ತಮ್ಮ ಪ್ರತಿಸ್ಪರ್ಧಿ ನವಾಸ್ಕಾನಿಯನ್ನು ಸೋಲಿಸಿದ್ದೇ ಆದಲ್ಲಿ, “ಹಿಂದೂಗಳೆಲ್ಲ ಒಗ್ಗಟ್ಟಾಗಿ ಬಿಜೆಪಿಯನ್ನು ಬೆಂಬಲಿಸಿದರೆ, ಯಾವುದು ಕೂಡ ಅಸಾಧ್ಯವಲ್ಲ’ ಎಂಬ ಸಂದೇಶವನ್ನು ದಕ್ಷಿಣದ ರಾಜ್ಯಗಳಿಗೆ ರವಾನಿಸಿದಂತಾಗುತ್ತದೆ.
50ಕ್ಕೂ ಹೆಚ್ಚು ಸೀಟುಗಳ ಟಾರ್ಗೆಟ್:
ಇದೇ ವೇಳೆ, 2024ರ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಿಜೆಪಿಗೆ 50ಕ್ಕೂ ಹೆಚ್ಚು ಸೀಟುಗಳ ಟಾರ್ಗೆಟ್ ನೀಡಿದ್ದಾರೆ ನಡ್ಡಾ. ಆಡಳಿತ ವಿರೋಧಿ ಅಲೆಯಿಂದಾಗಿ ಉತ್ತರದ ರಾಜ್ಯಗಳಲ್ಲಿ ಬಿಜೆಪಿ ಈ ಬಾರಿ ಕೆಲವು ಸೀಟುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಅದನ್ನು ಸರಿತೂಗಿಸುವ ನಿಟ್ಟಿನಲ್ಲಿ ದಕ್ಷಿಣದಲ್ಲಿ ಹೆಚ್ಚು ಸೀಟುಗಳನ್ನು ಪಡೆಯುವ ಕಾರ್ಯತಂತ್ರವನ್ನು ಬಿಜೆಪಿ ರೂಪಿಸಿದೆ.