Advertisement

4 ವರ್ಷದಲ್ಲಿ 35 ವಿಮಾನ ನಿಲ್ದಾಣ: ಪ್ರಧಾನಿ ಮೋದಿ

08:25 AM Sep 25, 2018 | Team Udayavani |

ಹೊಸದಿಲ್ಲಿ: ‘ಭಾರತ ಸ್ವತಂತ್ರವಾದಾಗಿನಿಂದ ಕೇವಲ 65 ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗಿತ್ತು. ಆದರೆ, ಕಳೆದ 4 ವರ್ಷಗಳಲ್ಲೇ 35 ನಿಲ್ದಾಣಗಳನ್ನು ಕಟ್ಟಲಾಗಿದೆ” ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಸಿಕ್ಕಿಂನ ರಾಜಧಾನಿ ಗ್ಯಾಂಗ್‌ಟಾಕ್‌ ಬಳಿಯ ಪಕ್ಯುಂಗ್‌ ಎಂಬ ಹಳ್ಳಿಯಲ್ಲಿನ ಬೆಟ್ಟದ ಮೇಲೆ ಸುಮಾರು 605 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಿಕ್ಕಿಂನ ಮೊದಲ ವಿಮಾನ ನಿಲ್ದಾಣದ ಉದ್ಘಾಟನೆಯನ್ನು ಸೋಮವಾರ ನೆರವೇರಿಸಿ ಅವರು ಮಾತನಾಡಿದರು.

Advertisement

ಇದನ್ನೇ ತಮ್ಮ ಭಾಷಣದಲ್ಲಿ ಉಲ್ಲೇಖೀಸಿದ ಮೋದಿ, “ಈ ಮೊದಲು ವರ್ಷಕ್ಕೊಂದು ಎಂಬ ಸರಾಸರಿ ಲೆಕ್ಕಾಚಾರದಡಿ ವಿಮಾನ ನಿಲ್ದಾಣ ನಿರ್ಮಿಸಲಾಗುತ್ತಿತ್ತು. ಆದರೀಗ, ಉಡಾನ್‌ ಯೋಜನೆಯಡಿ, ವರ್ಷಕ್ಕೆ ಸರಾಸರಿ 9 ನಿಲ್ದಾಣ ತಲೆಎತ್ತುತ್ತಿದೆ. ಈಶಾನ್ಯ ರಾಜ್ಯಗಳ ಅಭಿವೃದ್ಧಿಗಾಗಿ, ಈ ಭಾಗದಲ್ಲಿ ಸಂಪರ್ಕ, ವಿದ್ಯುತ್‌, ಹೆದ್ದಾರಿ ಹಾಗೂ ಮೂಲಸೌಕರ್ಯಗಳನ್ನು ನೀಡಲು ಟೊಂಕ ಕಟ್ಟಿ ನಿಂತಿದ್ದೇವೆ. ಹೊಸ ವಿಮಾನ ನಿಲ್ದಾಣದಿಂದ ಸಿಕ್ಕಿಂನ ಪ್ರವಾಸೋದ್ಯಮಕ್ಕೆ ಹಾಗೂ ಉದ್ಯೋಗಾವಕಾಶಕ್ಕೆ ಪುಷ್ಟಿ ಸಿಗಲಿದೆ. ಹವಾಯಿ ಚಪ್ಪಲ್‌ ಧರಿಸಿದವನೂ ವಿಮಾನದಲ್ಲಿ ಸಂಚರಿಸಬೇಕು ಎಂಬುದು ನನ್ನ ಆಸೆ” ಎಂದರು. ಇದಕ್ಕೂ ಮುನ್ನ ಗ್ಯಾಂಗ್‌ಟಾಕ್‌ನಿಂದ ಪಕ್ಯುಂಗ್‌ಗೆ ಕಾಪ್ಟರ್‌ನಲ್ಲಿ ಆಗಮಿಸುವ ವೇಳೆ ಮೋದಿ, ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋತು ತಮ್ಮ ಮೊಬೈಲ್‌ನಲ್ಲಿ ಕೆಲವು ಫೋಟೋಗಳನ್ನು ಸೆರೆಹಿಡಿದು, ಟ್ವಿಟರ್‌ಗೆ ಅಪ್‌ಲೋಡ್‌ ಮಾಡಿದ್ದಾರೆ.

ನಿಲ್ದಾಣದ ವೈಶಿಷ್ಟ್ಯಗಳು: ಇದು ಸಿಕ್ಕಿಂ ರಾಜಧಾನಿ ಗ್ಯಾಂಗ್‌ಟಾಕ್‌ನಿಂದ 30 ಕಿ.ಮೀ. ದೂರದಲ್ಲಿದೆ. ಅ. 4ರಿಂದ ಸಿಕ್ಕಿಂ, ಗುವಾಹಟಿ, ಕೋಲ್ಕತಾ ನಡುವೆ ಇಲ್ಲಿಂದ ವಿಮಾನ ಸಂಚಾರ ಶುರುವಾಗಲಿದೆ. 

– 2009ರಲ್ಲಿ ವಿಮಾನ ನಿಲ್ದಾಣಕ್ಕೆ ಶಂಕು ಸ್ಥಾಪನೆ
– ನಿಲ್ದಾಣಕ್ಕಾಗಿ ಬಳಸಿರುವ ಜಾಗ : 201 ಎಕರೆ
– ಸಮುದ್ರಮಟ್ಟದಿಂದ ನಿಲ್ದಾಣ ಇರುವ ಎತ್ತರ : 4,500 ಅಡಿ
– ನಿರ್ಮಾಣಕ್ಕೆ ಆಗಿರುವ ವೆಚ್ಚ : 605 ಕೋಟಿ ರೂ.
– 262.4  ಅಡಿ ನಿಲ್ದಾಣದ ಒಟ್ಟು ಎತ್ತರ; ವಿಶ್ವದಲ್ಲೇ ಅತಿ ಹೆಚ್ಚು 60 ಕಿ.ಮೀ. 
– ಭಾರತ, ಚೀನಾ ಗಡಿಯಿಂದ ನಿಲ್ದಾಣಕ್ಕೆ ಇರುವ ದೂರ

Advertisement

Udayavani is now on Telegram. Click here to join our channel and stay updated with the latest news.

Next