ಹೊಸದಿಲ್ಲಿ: ಕೋವಿಡ್-19 ಸಂಕಷ್ಟದ ವಿರುದ್ಧದ ಹೋರಾಟಕ್ಕೆ ಅಮೆರಿಕ ದೇಶವು ಭಾರತದ ಜೊತೆ ಕೈಜೋಡಿಸಿದೆ. ಕೋವಿಶೀಲ್ಡ್ ಲಸಿಕೆ ತಯಾರಿಸಲು ಕಚ್ಚಾ ವಸ್ತುಗಳನ್ನು ಕಳುಹಿಸಿಕೊಟ್ಟ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ನರೇಂದ್ರ ಮೋದಿ ದೂರವಾಣಿ ಸಂಭಾಷಣೆ ನಡೆಸಿದ್ದಾರೆ.
ಈ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಜತೆ ದೂರವಾಣಿಯಲ್ಲಿ ಫಲಪ್ರದಾಯಕ ಸಂಭಾಷಣೆ ನಡೆಯಿತು. ಎರಡು ದೇಶಗಳಲ್ಲಿರುವ ಕೋವಿಡ್ ಪರಿಸ್ಥಿತಿಯ ಬಗ್ಗೆ ಆಳವಾಗಿ ಚರ್ಚೆ ನಡೆಸಿದೆವು. ಅಮೆರಿಕದಿಂದ ಭಾರತಕ್ಕೆ ಅಗತ್ಯ ನೀಡುವುದಾಗಿ ಬೆಂಬಲಿಸಿದ ಅಧ್ಯಕ್ಷ ಜೋ ಬಿಡೆನ್ ಅವರಿಗೆ ಧನ್ಯವಾದಗಳು’ ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಕೊವಿಶೀಲ್ಡ್ ಲಸಿಕೆ ತಯಾರಿಸಲು ಅಗತ್ಯವಾಗಿರುವ ಕಚ್ಚಾ ವಸ್ತುಗಳನ್ನು ನೀಡಲು ಅಮೆರಿಕ ಕೊನೆಗೂ ಒಪ್ಪಿಕೊಂಡಿದೆ. ಕಚ್ಚಾ ವಸ್ತು ರಫ್ತಿಗೆ ನಿರ್ಬಂಧ ಹೇರಿ, ಭಾರತಕ್ಕೆ ಕಚ್ಚಾ ವಸ್ತುಗಳನ್ನು ಕೊಡುವುದಿಲ್ಲ ಎಂದು ಧಿಮಾಕು ತೋರಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗಕ್ಕೆ ಒಳಗಾದ ಬಳಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಭಾರತಕ್ಕೆ ಕೊರೊನಾ ವಿರುದ್ಧದ ಹೋರಾಟದಲ್ಲಿ ನೆರವು ನೀಡುವ ವಾಗ್ಧಾನ ಮಾಡಿದ್ದಾರೆ.
“ನಾವು ಕಷ್ಟದಲ್ಲಿದ್ದಾಗ ಭಾರತ ನಮ್ಮ ನೆರವಿಗೆ ಬಂದಿತ್ತು. ಈಗ ಭಾರತಕ್ಕೆ ಸಹಾಯ ಮಾಡುವ ಅವಕಾಶ ಬಂದಿದೆ’ ಎಂದು ಬೈಡೆನ್ ಟ್ವೀಟ್ ಮಾಡಿದ್ದಾರೆ. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಟ್ವೀಟ್ ಮಾಡಿ “ನಮ್ಮ ಸರ್ಕಾರ ಭಾರತದ ಜತೆಗೆ ಕೊರೊನಾ ನಿಯಂತ್ರಣಕ್ಕೆ ಕೆಲಸ ಮಾಡಲಿದೆ. ಆ ದೇಶಕ್ಕೆ ಹೆಚ್ಚುವರಿಯಾಗಿ ಅಗತ್ಯವಾಗಿರುವ ನೆರವು ನೀಡಲಾಗುತ್ತದೆ. ಭಾರತದ ಜನರು ಮತ್ತು ಆರೋಗ್ಯ ಕ್ಷೇತ್ರದ ಸಿಬ್ಬಂದಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುವೆ’ ಎಂದು ಬರೆದುಕೊಂಡಿದ್ದಾರೆ.
ಲಸಿಕೆ ಸಿದ್ಧಪಡಿಸಲು ಬೇಕಾದ ಕಚ್ಚಾ ವಸ್ತು ನೀಡುವುದಿಲ್ಲ ಎಂದು ಹೇಳಿದ್ದಕ್ಕೆ ಡೆಮಕ್ರಾಟ್ ಸಂಸದರಿಂದಲೇ ವಿರೋಧ ವ್ಯಕ್ತವಾಗಿತ್ತು.