ನವದೆಹಲಿ: ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರ ಕುರಿತಾದ ಮಂಡಿಸಿದ್ದ ಮೂರು ಮಸೂದೆಗಳನ್ನು ವಿರೋಧಿಸುತ್ತಿರುವ ವಿಪಕ್ಷಗಳ ವಿರುದ್ಧ ಆಕ್ರೊಶ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಕೃಷಿ ಕ್ಷೇತ್ರದ ಮಸೂದೆಗಳ ಬಗ್ಗೆ ರಾಜಕೀಯ ಪಕ್ಷಗಳು ಸುಳ್ಳನ್ನು ಹಬ್ಬಿಸುತ್ತಿವೆ. ಮಸೂದೆ ಬಗ್ಗೆ ನಾವು ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದು, ಇದರಿಂದ ರೈತರಿಗೆ ಲಾಭವಾಗಲಿದೆ ಎಂದು ತಿಳಿಸಿದ್ದಾರೆ.
ಶುಕ್ರವಾರ (ಸೆಪ್ಟೆಂಬರ್ 18, 2020) ಟೆಲಿವಿಷನ್ ಭಾಷಣದಲ್ಲಿ ಪ್ರಧಾನಿ ಮೋದಿ ಅವರು, ಇದೇ ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಆಹಾರ ಪದಾರ್ಥದ ಬಗ್ಗೆ ಭರವಸೆ ನೀಡಿದ್ದವು. ಆದರೆ ಈಗ ವಿರೋಧಿಸುತ್ತಿವೆ, ಯಾಕೆಂದರೆ ನಾವು ಕೃಷಿ ಮಸೂದೆಯನ್ನು ಜಾರಿಗೊಳಿಸುತ್ತಿದ್ದೇವು ಎಂದು ತಿರುಗೇಟು ನೀಡಿದ್ದಾರೆ.
ರೈತರಿಗೆ ಪರ್ಯಾಯ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಎಪಿಎಂಸಿಯ ನಿಯಮಾವಳಿಯನ್ನು ತಿದ್ದುಪಡಿ ಮಾಡುವುದಾಗಿ ಈ ಹಿಂದೆ ಭರವಸೆ ನೀಡಿದ್ದು, ಇದೀಗ ಅದೇ ತಿದ್ದುಪಡಿ ಮಸೂದೆಯನ್ನು ವಿರೋಧಪಕ್ಷಗಳು ವಿರೋಧಿಸುತ್ತಿವೆ. ಅವರಿಗೆ ರೈತರಿಗೆ ನೆರವು ನೀಡುವುದು ಬೇಕಾಗಿಲ್ಲ, ವಿಪಕ್ಷಗಳು ಮಧ್ಯವರ್ತಿಗಳಿಗೆ ನೆರವು ನೀಡುವುದನ್ನು ಇಷ್ಟಪಡುತ್ತಿದ್ದಾರೆ ಎಂದು ಪ್ರಧಾನಿ ಟೀಕಿಸಿದ್ದಾರೆ.
ಇದನ್ನೂ ಓದಿ: ಡ್ರಗ್ ದಂಧೆ: ನಿರೂಪಕ ಅಕುಲ್, ಸಂತೋಷ್, ಕಾಂಗ್ರೆಸ್ ನ ಮಾಜಿ ಶಾಸಕರ ಪುತ್ರನಿಗೆ ಸಿಸಿಬಿ ಶಾಕ್
ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ರೈತರ ಕನಿಷ್ಠ ಬೆಂಬಲ ಬೆಲೆ (ಎಂಎಸ್ ಪಿ) ಬಗ್ಗೆ ಮಾತನಾಡುತ್ತಿದ್ದವು. ಆದರೆ ತಮ್ಮ ಅಧಿಕಾರಾವಧಿಯಲ್ಲಿ ಯಾವತ್ತೂ ಈ ಭರವಸೆಯನ್ನು ಈಡೇರಿಸಿಲ್ಲ ಎಂದು ಆರೋಪಿಸಿದರು.
ಕೃಷಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ ಎನ್ ಡಿಎ ಅಂಗಪಕ್ಷ ಶಿರೋಮಣಿ ಅಕಾಲಿದಳ ಪಕ್ಷದ ಸಚಿವೆ ಹರ್ ಸಿಮ್ರತ್ ಕೌರ್ ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.