ನವದೆಹಲಿ: ಮಾಜಿ ಪ್ರಧಾನಿ ಮತ್ತು ಬಿಜೆಪಿಯ ಧೀಮಂತ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ಬಿಜೆಪಿಯಿಂದ ಶನಿವಾರ ದೇಶಾದ್ಯಂತ ಆಚರಿಸಲಾಗುತ್ತಿದ್ದು,ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ಸದೈವ್ ಅಟಲ್ ಸಮಾಧಿಯಲ್ಲಿ ಪುಷ್ಪಾಂಜಲಿ ಸಲ್ಲಿಸಿದರು.
1924 ರಲ್ಲಿ ಗ್ವಾಲಿಯರ್‌ನಲ್ಲಿ ಜನಿಸಿದ ವಾಜಪೇಯಿ ದಶಕಗಳ ಕಾಲ ಬಿಜೆಪಿಯ ಪರಮೋಚ್ಛ ನಾಯಕರಾಗಿದ್ದರು. ಪೂರ್ಣಾವಧಿಯ ಅಧಿಕಾರವನ್ನು ಪೂರೈಸಿದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ಖ್ಯಾತಿ ಹೊಂದಿ ಅಜಾತ ಶತ್ರು ಎನಿಸಿ ಕೊಂಡಿದ್ದರು.
ಅಟಲ್ ಜಿ ಅವರ ಜಯಂತಿಯಂದು ಅವರನ್ನು ಸ್ಮರಿಸುತ್ತಿದ್ದೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ದೇಶಕ್ಕೆ ಅವರ ಶ್ರೀಮಂತ ಸೇವೆಯಿಂದ ನಾವು ಸ್ಫೂರ್ತಿ ಪಡೆದಿದ್ದೇವೆ. ಭಾರತವನ್ನು ಬಲಿಷ್ಠ ಮತ್ತು ಅಭಿವೃದ್ಧಿಗೊಳಿಸಲು ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅವರ ಅಭಿವೃದ್ಧಿ ಉಪಕ್ರಮಗಳು ಲಕ್ಷಾಂತರ ಭಾರತೀಯರ ಮೇಲೆ ಧನಾತ್ಮಕವಾಗಿ ಪ್ರಭಾವ ಬೀರಿವೆ ಎಂದು ಮೋದಿ ಹೇಳಿದ್ದಾರೆ.