Advertisement

ಮೋದಿ ಒಗ್ಗಟ್ಟಿನ ಮಂತ್ರ; ಡೆನ್ಮಾರ್ಕ್‌ನಲ್ಲಿ ಭಾರತ-ನಾರ್ಡಿಕ್‌ ಶೃಂಗದಲ್ಲಿ ಪ್ರಧಾನಿ ಭಾಗಿ

09:46 AM May 05, 2022 | Team Udayavani |

ಕೋಪನ್‌ಹೇಗನ್‌: ಭಾರತ ಮತ್ತು ನಾರ್ಡಿಕ್‌ ದೇಶಗಳು ಒಗ್ಗಟ್ಟಾಗಿ ಸಾಗಿದರೆ ಜಾಗತಿಕ ಸಮೃದ್ಧಿ ಹಾಗೂ ಸುಸ್ಥಿರ ಅಭಿವೃದ್ಧಿಗೆ ಭಾರೀ ಕೊಡುಗೆ ನೀಡಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

3 ದಿನಗಳ ವಿದೇಶ ಪ್ರವಾಸದ ಕೊನೆಯ ದಿನವಾದ ಬುಧವಾರ ಡೆನ್ಮಾರ್ಕ್‌ನಲ್ಲಿ ನಡೆದ 2ನೇ ಭಾರತ-ನಾರ್ಡಿಕ್‌ ಶೃಂಗದಲ್ಲಿ ಭಾಗವಹಿಸಿದ ಅವರು ಈ ಮಾತುಗಳನ್ನಾಡಿದ್ದಾರೆ. ನಾರ್ಡಿಕ್‌ ದೇಶಗಳಾದ (ಉತ್ತರ ಯುರೋಪ್‌ ಮತ್ತು ಉತ್ತರ ಅಟ್ಲಾಂಟಿಕ್‌ ಭಾಗದಲ್ಲಿ ಬರುವ ದೇಶಗಳು) ಡೆನ್ಮಾರ್ಕ್‌, ಫಿನ್ಲಂಡ್‌, ಐಸ್‌ಲ್ಯಾಂಡ್‌, ನಾರ್ವೆ ಮತ್ತು ಸ್ವೀಡನ್‌ನ ಪ್ರಧಾನ­ಮಂತ್ರಿಗಳು ಈ ಶೃಂಗದಲ್ಲಿ ಪಾಲ್ಗೊಂಡಿದ್ದರು.

ಕೊರೊನಾ ಸಾಂಕ್ರಾಮಿಕೋತ್ತರ ಆರ್ಥಿಕ ಚೇತರಿಕೆ, ಹವಾಮಾನ ವೈಪರೀತ್ಯ, ನವೀಕರಿಸಬಹು­ದಾದ ಇಂಧನದಲ್ಲಿ ಸಹಕಾರ ಸೇರಿದಂತೆ ವಿವಿಧ ವಿಚಾರಗಳ ಕುರಿತು ಇಲ್ಲಿ ಚರ್ಚೆ ನಡೆಯಿತು. 2ನೇ ಭಾರತ-ನಾರ್ಡಿಕ್‌ ಶೃಂಗವು ಉದಯೋನ್ಮುಖ ತಂತ್ರ­ಜ್ಞಾನಗಳು, ಹೂಡಿಕೆ, ಸ್ವತ್ಛ ಇಂಧನ, ಆಕ್ಟಿಕ್‌ ಸಂಶೋಧನೆ ಮತ್ತಿತರ ವಲಯಗಳಲ್ಲಿ ಸಹಕಾರ ಸಾಧಿಸಲು ನೆರವಾಗಲಿದೆ ಎಂದೂ ಮೋದಿ ಹೇಳಿ­ದ್ದಾರೆ. ಶೃಂಗದಲ್ಲಿ ಉಕ್ರೇನ್‌ ಯುದ್ಧದ ವಿಚಾರವೂ ಪ್ರಸ್ತಾಪವಾಗಿದ್ದು, ಮಾನವೀಯ ಬಿಕ್ಕಟ್ಟಿನ ಕುರಿತು ಎಲ್ಲ ಪ್ರಧಾನಿಗಳೂ ಕಳವಳ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನ ಫಿನ್ಲಂಡ್‌ ಪ್ರಧಾನಿ ಜೊತೆಗಿನ ಮಾತುಕತೆ ವೇಳೆ ಡಿಜಿಟಲ್‌ ಸಂಶೋಧನೆ, ಡಿಜಿಟಲ್‌ ಸರಕುಗಳು ಮತ್ತು ಪ್ಲಾಟ್‌ಫಾರಂಗಳ ಕುರಿತು ಚರ್ಚೆ ನಡೆಯಿತು. ಎರಡೂ ದೇಶಗಳ ನಡುವಿನ ಡಿಜಿಟಲ್‌ ಪಾಲುದಾರಿಕೆಯನ್ನು ವೃದ್ಧಿಸಿಕೊಳ್ಳಲು ಬದ್ಧರಾಗಿ­ರುವುದಾಗಿ ಉಭಯ ನಾಯಕರು ಹೇಳಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್‌ ಮೋಹನ್‌ ಕ್ವಾತ್ರಾ ಮಾಹಿತಿ ನೀಡಿದ್ದಾರೆ.

ಯೋಗದ ಜನಪ್ರಿಯತೆ: ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ ಐಸ್‌ಲ್ಯಾಂಡ್‌ ಪ್ರಧಾನಿ ಕ್ಯಾಟ್ರಿನ್‌ ಜಾಕೋಬ್‌ಡಾಟಿರ್‌ ಅವರು, ಯೋಗದ ಕುರಿತು ಪ್ರಸ್ತಾಪಿಸಿದ್ದಾರೆ. ಐಸ್‌ಲ್ಯಾಂಡ್‌ನ‌ಲ್ಲಿ ಯೋಗ ಜನಪ್ರಿಯತೆ ಪಡೆದಿದ್ದು, ಬಹುತೇಕ ಮಂದಿ ದಿನಂಪ್ರತಿ ಯೋಗಾಸನ ಮಾಡುತ್ತಾರೆ ಎಂದಿದ್ದಾರೆ. ಇದೇ ವೇಳೆ, ಮೀನುಗಾರಿಕೆ, ಆಹಾರ ಸಂಸ್ಕರಣೆ ಸೇರಿದಂತೆ “ನೀಲಿ ಆರ್ಥಿಕತೆ’ ಕುರಿತೂ ಮೋದಿ- ಕ್ಯಾಟ್ರಿನ್‌ ಚರ್ಚಿಸಿದ್ದಾರೆ.

Advertisement

ಪ್ಯಾರಿಸ್‌ಗೆ ಭೇಟಿ: ಡೆನ್ಮಾರ್ಕ್‌ ಪ್ರವಾಸ ಮುಗಿಸಿದ ಪ್ರಧಾನಿ ಮೋದಿ ಅಲ್ಲಿಂದ ಫ್ರಾನ್ಸ್‌ಗೆ ತೆರಳಿದ್ದಾರೆ. ಪ್ಯಾರಿಸ್‌ನಲ್ಲಿ ಅವರು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವಲ್‌ ಮ್ಯಾಕ್ರನ್‌ ಅವರನ್ನು ಭೇಟಿ­ಯಾಗಿ, ಮಾತುಕತೆ ನಡೆಸಲಿದ್ದಾರೆ. ಅಲ್ಲಿಗೆ ಮೋದಿಯವರ 3 ದಿನಗಳ ವಿದೇಶ ಪ್ರವಾಸ ಸಮಾಪ್ತಿಯಾಗಲಿದೆ.

16ಕ್ಕೆ ನೇಪಾಲ ಪ್ರವಾಸ:
ಪ್ರಧಾನಮಂತ್ರಿ ನರೇಂದ್ರ ಮೋದಿ ಮೇ 16ರಂದು ನೇಪಾಳ ಪ್ರವಾಸ ಕೈಗೊಳ್ಳಲಿದ್ದಾರೆ. ಆ ದಿನ ಗೌತಮ ಬುದ್ಧನ ಜನ್ಮಸ್ಥಳ ಲುಂಬಿಣಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ. ಒಟ್ಟು ಒಂದು ಗಂಟೆಯ ಪ್ರವಾಸ ಇದಾಗಿರಲಿದೆ.

ನಾರ್ಡಿಕ್‌ ನಾಯಕರಿಗೆ ಮೋದಿ ಗಿಫ್ಟ್
ನಾರ್ಡಿಕ್‌ ದೇಶಗಳ ನಾಯಕರಿಗೆ ಪ್ರಧಾನಿ ಮೋದಿ ಅವರು ವಿಶೇಷ ಉಡುಗೊರೆಗಳನ್ನು ನೀಡಿದ್ದಾರೆ. ಛತ್ತೀಸ್‌ಗಢದ ಡೋಕ್ರಾ ಬೋಟ್‌, ಗುಜರಾತ್‌ನ ರೋಗನ್‌ ಪೈಂಟಿಂಗ್‌(ಬಟ್ಟೆಯಲ್ಲಿ ಬಿಡಿಸಲಾದ ಕಲಾಕೃತಿ), ವಾರಾಣಸಿಯ ಮೀನಕಾರಿ ಪಕ್ಷಿಯ ಬೆಳ್ಳಿಯ ಪ್ರತಿರೂಪ, ರಾಜಸ್ಥಾನದ ಹಿತ್ತಾಳೆಯ ಮರದ ಪ್ರತಿಕೃತಿ (ಟ್ರೀ ಆಫ್ ಲೈಫ್), ಕಛ ಎಂಬ್ರಾಯಿಡರಿಯುಳ್ಳ ಅಲಂಕಾರಿಕ ವಸ್ತು, ಜಮ್ಮು- ಕಾಶ್ಮೀರದ ಪಶ್ಮೀನಾ ಶಾಲು… ಹೀಗೆ ಭಾರತದ ಶ್ರೀಮಂತ ಹಾಗೂ ವೈವಿಧ್ಯಮಯ ಪರಂಪರೆ, ಕಲಾವೈಭವವನ್ನು ಬಿಂಬಿಸುವಂಥ ಉಡುಗೊರೆ ಗಳನ್ನು ಅವರು ವಿಶ್ವನಾಯಕರಿಗೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next