ಮುಂಬೈ: ದೇಶಾದ್ಯಂತ ಗಣೇಶೋತ್ಸವವನ್ನು ಆಚರಿಸಲಾಗುತ್ತದೆ. ಎಲ್ಲೆಡೆ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ನಡೆಸಲಾಗುತ್ತಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಕೂಡ ತಮ್ಮ ಮನೆಯಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದಾರೆ. ಅದರಂತೆ ಬುಧವಾರ ಅವರ ಮನೆಯಲ್ಲಿ ಗಣೇಶ ಪೂಜೆ ಆಯೋಜಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡ ಈ ಒಂದು ಶುಭ ಕಾರ್ಯಕ್ರಮಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು.
ಈ ಕುರಿತ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಈ ವಿಡಿಯೋ ದಲ್ಲಿ ಪ್ರಧಾನಿ ಮೋದಿ ಅವರು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹಾಗೂ ಅವರ ಪತ್ನಿ ಕಲ್ಪನಾ ದಾಸ್ ಅವರೊಂದಿಗೆ ಗಣಪತಿಗೆ ಪೂಜೆ ಸಲ್ಲಿಸುವುದು ಕಾಣಬಹುದು. ಈ ಒಂದು ಶುಭ ಸಮಾರಂಭದಲ್ಲಿ ಭಾಗಿಯಾದ ಪ್ರಧಾನಮಂತ್ರಿಯವರು ಮಹಾರಾಷ್ಟ್ರದ ಸಾಂಪ್ರದಾಯಿಕ ಟೋಪಿಯನ್ನು ಧರಿಸಿರುವುದು ವಿಶೇಷವಾಗಿತ್ತು.
ಮಹಾರಾಷ್ಟ್ರದಲ್ಲಿ ಹತ್ತು ದಿನಗಳ ಕಾಲ ಆಚರಿಸುವ ಗಣೇಶನ ಹಬ್ಬ ಶನಿವಾರದಿಂದ ಆರಂಭಗೊಂಡಿದೆ. ಸಿಜೆಐ ಚಂದ್ರಚೂಡ್ ಮಹಾರಾಷ್ಟ್ರದಿಂದ ಬಂದವರು. ಗಣೇಶ ಚತುರ್ಥಿ ಇಲ್ಲಿನ ಪ್ರಮುಖ ಹಬ್ಬವಾಗಿದ್ದು, ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಮುಂಬೈನಲ್ಲಿ ಜನಿಸಿದ ಚಂದ್ರಚೂಡ್ ತಮ್ಮ ಆರಂಭಿಕ ಜೀವನವನ್ನು ಮಹಾರಾಷ್ಟ್ರದಲ್ಲಿ ಕಳೆದರು. ಇಲ್ಲಿಂದಲೇ ಕಾನೂನು ಕ್ಷೇತ್ರದಲ್ಲಿ ಅವರ ಪಯಣ ಆರಂಭವಾಯಿತು.