Advertisement

ಆ.2ರಿಂದ 15ರವರೆಗೆ ತ್ರಿವರ್ಣ ಧ್ವಜ ಅಭಿಯಾನ ನಡೆಸಲು ಪ್ರಧಾನಿ ಸಲಹೆ

07:46 AM Aug 01, 2022 | Team Udayavani |

ನವದೆಹಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವವು ಒಂದು ದೊಡ್ಡ ಮಟ್ಟದ ಸಾಮೂಹಿಕ ಚಳವಳಿಯ ರೂಪ ಪಡೆಯುತ್ತಿದೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರು, “ಎಲ್ಲರೂ ಆ.2ರಿಂದ 15ರವರೆಗೆ ತ್ರಿವರ್ಣ ಧ್ವಜವನ್ನು ತಮ್ಮ ಸಾಮಾಜಿಕ ಜಾಲತಾಣಗಳ ಪ್ರೊಫೈಲ್‌ ಚಿತ್ರವಾಗಿ ಬಳಸಿ’ ಎಂದು ದೇಶವಾಸಿಗಳಿಗೆ ಕರೆ ನೀಡಿದ್ದಾರೆ.

Advertisement

ಭಾನುವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್‌ ಕಿ ಬಾತ್‌ನಲ್ಲಿ ಮಾತನಾಡಿದ ಅವರು, ಆ.13ರಿಂದ 15ರವರೆಗೆ ಆಯೋಜಿಸಲಾಗಿರುವ “ಹರ್‌ ಘರ್‌ ತಿರಂಗಾ’ ಅಭಿಯಾನದ ಅಂಗವಾಗಿ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಬೇಕು. ಆ.2ರಂದು ನಮ್ಮ ತ್ರಿವರ್ಣ ಧ್ವಜದ ವಿನ್ಯಾಸ ಮಾಡಿರು ಪಿಂಗಾಳಿ ವೆಂಕಯ್ಯ ಅವರ ಜನ್ಮದಿನ. ಹಾಗಾಗಿ ಅಂದಿನಿಂದಲೇ ಎಲ್ಲರೂ ತಮ್ಮ ಪ್ರೊಫೈಲ್‌ ಪಿಕ್‌ಗಳಲ್ಲಿ ತಿರಂಗಾವನ್ನು ಹಾಕಿ ಅವರನ್ನು ಗೌರವಿಸಿ ಎಂದು ಮನವಿ ಮಾಡಿದ್ದಾರೆ.

ರೈಲು ನಿಲ್ದಾಣಗಳಿಗೆ ಭೇಟಿ ಕೊಡಿ:
ಸ್ವಾತಂತ್ರ್ಯ ಚಳವಳಿಯ ಇತಿಹಾಸದೊಂದಿಗೆ ಬೆರೆತಿರುವ ಹಲವಾರು ರೈಲು ನಿಲ್ದಾಣಗಳು ನಮ್ಮಲ್ಲಿವೆ. 24 ರಾಜ್ಯಗಳಲ್ಲಿರುವ ಇಂಥ 75 ರೈಲು ನಿಲ್ದಾಣಗಳನ್ನು ಗುರುತಿಸಲಾಗಿದ್ದು, ಅಲ್ಲಿ ಹಲವು ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು. ಜು.18-23ರವರೆಗೆ ರೈಲ್ವೆಯು 27 ರೈಲುಗಳ ಮೂಲಕ “ಆಜಾದಿ ಕಿ ರೈಲ್‌ ಗಾಡಿ’ ಸಪ್ತಾಹವನ್ನು ಏರ್ಪಡಿಸಿತ್ತು. ನಾನು ದೇಶವಾಸಿಗಳಿಗೆ ಮನವಿ ಮಾಡುವುದೇನೆಂದರೆ, ನಿಮಗೆ ಸಮೀಪದಲ್ಲಿರುವ ಇಂಥ ರೈಲು ನಿಲ್ದಾಣಗಳಿಗೆ ಭೇಟಿ ನೀಡಿ. ಶಾಲಾ ಶಿಕ್ಷಕರು ವಿದ್ಯಾರ್ಥಿಗಳನ್ನು ಇಲ್ಲಿಗೆ ಕರೆದುಕೊಂಡು ಹೋಗಿ, ಆ ರೈಲು ನಿಲ್ದಾಣ ಹಾಗೂ ಸ್ವಾತಂತ್ರ್ಯ ಚಳವಳಿಗೆ ಇದ್ದ ನಂಟನ್ನು ವಿವರಿಸಿ ಎಂದು ಮೋದಿ ಹೇಳಿದ್ದಾರೆ.

ಬೆಂಗಳೂರಿನ ಆಟಿಕೆ ಸ್ಟಾರ್ಟಪ್‌ಗೆ ಪ್ರಶಂಸೆ
ಭಾರತದ ಆಟಿಕೆ ಉದ್ದಿಮೆಯು ಯಾರೂ ಊಹಿಸದ ಮಟ್ಟಿಗೆ ಯಶಸ್ವಿಯಾಗುತ್ತಿದೆ ಎಂದು ಹೇಳಿದ ಮೋದಿ, 300-400 ಕೋಟಿ ರೂ.ಗಳಷ್ಟಿದ್ದ ಆಟಿಕೆಗಳ ರಫ್ತು ಪ್ರಮಾಣ ಈಗ 2,600 ಕೋಟಿ ರೂ.ಗಳಿಗೇರಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಮೊದಲೆಲ್ಲ 3 ಸಾವಿರ ಕೋಟಿ ರೂ.ಗೂ ಅಧಿಕ ಮೌಲ್ಯದ ಆಟಿಕೆಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗಿತ್ತು. ಆದರೆ, ಈಗ ಆಟಿಕೆಗಳ ಆಮದು ಪ್ರಮಾಣ ಶೇ.70ರಷ್ಟು ತಗ್ಗಿದೆ ಎಂದೂ ಮೋದಿ ತಿಳಿಸಿದ್ದಾರೆ. ಆಟಿಗೆ ಜಗತ್ತಿನ ಮೇಲೆ ಸ್ಟಾರ್ಟಪ್‌ ವಲಯವೂ ಗಮನ ಹರಿಸಿದ್ದು, ಬೆಂಗಳೂರಿನ ನವೋದ್ಯಮ “ಶುಮ್ಮೆ ಟಾಯ್ಸ’ ಪರಿಸರಸ್ನೇಹಿ ಆಟಿಕೆಗಳ ತಯಾರಿಕೆಯಲ್ಲಿ ತೊಡಗಿರುವುದು ಪ್ರಶಂಸಾರ್ಹ ಎಂದಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next