Advertisement

ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ- ಟ್ರಂಪ್‌ ಭೇಟಿ?

03:45 AM Feb 18, 2017 | Team Udayavani |

ನವದೆಹಲಿ/ ವಾಷಿಂಗ್ಟನ್‌: ಪ್ರಧಾನಿ ನರೇಂದ್ರ ಮೋದಿ ಅವರು ಮೇ ತಿಂಗಳ ಆರಂಭದಲ್ಲಿ ಅಮೆರಿಕ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ. ಈ ವೇಳೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜತೆಗೆ ಎಚ್‌ 1ಬಿ ವೀಸಾ ಮತ್ತು ಗ್ರೀನ್‌ ಕಾರ್ಡ್‌ ಕಡಿತ ನೀತಿ ಕುರಿತು ಮೋದಿ ಚರ್ಚಿಸುತ್ತಾರೆ ಎನ್ನಲಾಗಿದೆ.

Advertisement

ಪ್ರಧಾನಿ ಮೋದಿ ಅವರು ಈ ಹಿಂದೆ ದೂರವಾಣಿಯಲ್ಲಿ ಮಾತುಕತೆ ನಡೆಸಿದಾಗ, ನಿಪುಣ ಟೆಕ್ಕಿಗಳಿಗೆ ನಮ್ಮ ದೇಶದಲ್ಲಿ ಯಾವುದೇ ಅಪಾಯವಿಲ್ಲ ಎಂದು ಟ್ರಂಪ್‌ ಭರವಸೆಯಿತ್ತಿದ್ದರು. ಭಾರತೀಯ ಸಾಫ್ಟ್ವೇರ್‌ ಎಂಜಿನಿಯರುಗಳು ಅಮೆರಿಕದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದು, ಅಲ್ಲಿನ ತಂತ್ರಜ್ಞಾನ ಕ್ಷೇತ್ರದ ಏಳ್ಗೆಗೆ ಭಾರತೀಯರ ಕೊಡುಗೆ ಅಪಾರ. ಇತ್ತ ಭಾರತವೂ ಡಿಜಿಟಲೀಕರಣಕ್ಕೆ ಹೆಜ್ಜೆ ಇಟ್ಟಿರುವುದರಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಎರಡೂ ದೇಶಗಳ ನಡುವೆ ಮಹತ್ವದ ಒಪ್ಪಂದಗಳು ಏರ್ಪಡಲಿದ್ದು, ಎಚ್‌ 1ಬಿ ವೀಸಾ ಮತ್ತು ಗ್ರೀನ್‌ ಕಾರ್ಡ್‌ ಕಡಿತ ನೀತಿ ಕುರಿತೂ ಮೋದಿ ಅವರು ಚರ್ಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಟ್ರಂಪ್‌ ಆಫ‌ರ್‌ ತಿರಸ್ಕಾರ!: ರಾಷ್ಟ್ರೀಯ ಭದ್ರತಾ ಸಲಹೆಗಾರ ಹುದ್ದೆಗೆ ಮೈಕೆಲ್‌ ಫ್ಲಿನ್‌ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ, ನೌಕಾದಳದ ಮಾಜಿ ಮುಖ್ಯಸ್ಥ ರಾಬರ್ಟ್‌ ಹಾರ್ವರ್ಡ್‌ಗೆ ಟ್ರಂಪ್‌ ಆಫ‌ರ್‌ ನೀಡಿದ್ದರು. ಆದರೆ, ರಾಬರ್ಟ್‌ ವೈಯಕ್ತಿಕ ಕಾರಣಗಳನ್ನು ನೀಡಿ, ಅವಕಾಶವನ್ನು ತಿರಸ್ಕರಿಸಿದ್ದಾರೆ. ನನಗೆ ಎಲ್ಲ ರೀತಿಯ ಸೌಲಭ್ಯ ನೀಡಲು ಸರ್ಕಾರ ಮುಂದಾಗಿತ್ತು. ನನ್ನ ಸಿಬ್ಬಂದಿಯನ್ನೇ ಭದ್ರತಾ ಸಲಹಾ ತಂಡಕ್ಕೆ ತರುವಂತೆಯೂ ಹೇಳಿದ್ದರು. 40 ವರ್ಷದಿಂದ ಸೇನೆಯಲ್ಲಿದ್ದಿದ್ದು ತೃಪ್ತಿ ನೀಡಿದೆ. ವೈಯಕ್ತಿಕ ಕಾರಣಕ್ಕೆ ಆಫ‌ರ್‌ ತಿರಸ್ಕರಿಸಿದ್ದೇನೆ ಎಂದಿದ್ದಾರೆ.

ಮಾಧ್ಯಮ ವಿರುದ್ಧ ಕಿಡಿ: ನನ್ನ ಸರ್ಕಾರ ಬಹಳ ಸೂಕ್ಷ್ಮವಾಗಿ ಕೆಲಸ ಮಾಡುತ್ತಿದೆ. ಆದರೆ, ಮಾಧ್ಯಮಗಳು ನಮ್ಮ ಮೇಲೆ ನಿರಂತರ ದಾಳಿಗೆ ಯತ್ನಿಸುತ್ತಲೇ ಇವೆ. ನಾನು ಪತ್ರಿಕೆ ಪುಟ ತೆರೆದರೆ, ಟಿವಿ ಆನ್‌ ಮಾಡಿದರೆ, ಅಲ್ಲಿ ನನ್ನ ವಿರುದ್ಧದ ಸುದ್ದಿಗಳೇ ರಾರಾಜಿಸುತ್ತಿರುತ್ತವೆ. ನಾನು ಅಸಂಬದ್ಧವಾಗಿ ಮಾತನಾಡುವವನಲ್ಲ. ಹೀಗೆಲ್ಲ ಹೇಳುವ ನೀವೇ ಅಪ್ರಮಾಣಿಕರು ಎಂದು ಮಾಧ್ಯಮಗಳ ವಿರುದ್ಧ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹರಿಹಾಯ್ದಿದ್ದಾರೆ. ತಮ್ಮ ನೇತೃತ್ವದ ಸರ್ಕಾರ ಉತ್ತಮ ಮಷಿನ್‌ನಂತೆ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next