ಹೊಸದಿಲ್ಲಿ : ತ್ರಿವಳಿ ತಲಾಕ್ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದ ಐವರು ಅರ್ಜಿದಾರರ ಪೈಕಿ ಓರ್ವಳಾಗಿರುವ ಇಶ್ರತ್ ಜಹಾನ್ ಭಾರತೀಯ ಜನತಾ ಪಕ್ಷ ಸೇರಿದ್ದಾರೆ; ಪ್ರಧಾನಿ ನರೇಂದ್ರ ಮೋದಿ ತ್ರಿವಳಿ ತಲಾಕ್ ನಿಷೇಧಿಸುವ ಕ್ರಾಂತಿಕಾರಿ ಕಾನೂನನ್ನು ತಂದಿರುವುದನ್ನು ಆಕೆ ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ.
“ತ್ರಿವಳಿ ತಲಾಕ್ ಸಂತ್ರಸ್ತೆಯರ ಹಿತಾಸಕ್ತಿಯಲ್ಲಿ ಮೋದಿ ಜೀ ಕ್ರಾಂತಿಕಾರಿ ಕಾನೂನನ್ನು ತಂದಿದ್ದಾರೆ. ನಿಜಕ್ಕೂ ನನಗೆ ಸಂತಸವಾಗಿದೆ. ನಾನು ಬಿಜೆಪಿಯ ಮಹಿಳಾ ವಿಭಾಗದಲ್ಲಿ ಕೆಲಸ ಮಾಡುವೆ’ ಎಂದು ಇಶ್ರತ್ ಬಿಜೆಪಿ ಸೇರಿದೊಡನೆಯೇ ಪ್ರಕಟಿಸಿದರು.
ಇಶ್ರತ್ ಅವರನ್ನು ಭಾರತೀಯ ಜನತಾ ಪಕ್ಷದ ಹೌರಾ ಘಟಕ ಅಭಿನಂದಿಸಿ, ಸಮ್ಮಾನಿಸಿ, ಪಕ್ಷಕ್ಕೆ ಸೇರಿಸಿಕೊಂಡಿತ್ತು. ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಯಂತನ್ ಬಸು ಅವರು “ಇಶ್ರತ್ ಅವರನ್ನು ರಾಜ್ಯ ಮಟ್ಟದಲ್ಲಿ ಸಮ್ಮಾನಿಸುವ ಕಾರ್ಯಕ್ರಮವನ್ನು ಸದ್ಯದಲ್ಲೇ ಹಮ್ಮಿಕೊಳ್ಳಲಾಗುವುದು’ ಎಂದು ಹೇಳಿದ್ದಾರೆ.
ತ್ರಿವಳಿ ತಲಾಕ್ ವಿರುದ್ಧ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದ ಐವರು ಅರ್ಜಿದಾರರ ಪೈಕಿ ಒಬ್ಬಳಾಗಿರುವ ಇಶ್ರತ್ ಳನ್ನು ಆಕೆಯ ಪತಿ 2014ರಲ್ಲಿ ದುಬೈನಿಂದಲೇ ಫೋನ್ ಮೂಲಕ ಮೂರು ಬಾರಿ ತಲಾಕ್ ಉಚ್ಚರಿಸಿ ವಿಚ್ಛೇದನ ನೀಡಿದ್ದರು.
ವಿವಾದಿತ ತ್ರಿವಳಿ ತಲಾಕ್ ಪದ್ದತಿಯನ್ನು ಸುಪ್ರೀಂ ಕೋರ್ಟ್ ಈ ವರ್ಷ ಆ.22ರಂದು ಅಸಂವಿಧಾನಿಕ ವೆಂದು ಹೇಳಿ ತೊಡೆದು ಹಾಕಿತ್ತು.
ತ್ರಿವಳಿ ತಲಾಕ್ ಮಸೂದೆಯನ್ನು ಲೋಕಸಭೆಯು ಡಿಸೆಂಬರ್‌ನಲ್ಲಿ ನಡೆದಿದ್ದ ಚಳಿಗಾಲದ ಅಧಿವೇಶನದಲ್ಲಿ ಪಾಸು ಮಾಡಿತ್ತು. ಅದನ್ನೀಗ ರಾಜ್ಯಸಭೆ ಕೈಗೆತ್ತಿಕೊಂಡಿದೆ.