ಸಾಗರ್(ಮಧ್ಯ ಪಾದೇಶ): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಆಧ್ಯಾತ್ಮಚಿಂತಕ ಮತ್ತು ಸಮಾಜ ಸುಧಾರಕ ಸಂತ ರವಿದಾಸ್ ಅವರಿಗೆ ಸಮರ್ಪಿಸಲಾದ 100 ಕೋಟಿ ರೂ. ಮೌಲ್ಯದ ದೇವಾಲಯ ಮತ್ತು ಸ್ಮಾರಕಕ್ಕೆ ಶಂಕುಸ್ಥಾಪನೆ ಮಾಡಿದರು.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ರಾಜ್ಯಪಾಲ ಮಂಗುಭಾಯ್ ಪಟೇಲ್ ಮತ್ತು ಕೇಂದ್ರ ಸಚಿವ ವೀರೇಂದ್ರ ಕುಮಾರ್ ಅವರ ಸಮ್ಮುಖದಲ್ಲಿ ಬದ್ತುಮಾ ಗ್ರಾಮದಲ್ಲಿ ಪ್ರಧಾನಿ ಮೋದಿ ಅವರು ಭೂಮಿ ಪೂಜೆ ನೆರವೇರಿಸಿ ಶಂಕುಸ್ಥಾಪನೆ ಮಾಡಿದರು.
ಸಂತ ರವಿದಾಸ್ ಅವರ ಮೂರ್ತಿಯ ಮುಂದೆ ಶಿರಬಾಗಿ ನಮಿಸಿದ ಪ್ರಧಾನಿ, ನಿರ್ಮಾಣವಾಗಲಿರುವ ಭವ್ಯ ಸ್ಮಾರಕ-ದೇವಾಲಯದ ಮಾದರಿಯನ್ನೂ ಪರಿಶೀಲಿಸಿದರು.
ಖಜುರಾಹೊ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಮಧ್ಯ ಪ್ರದೇಶ ಪ್ರವಾಸವನ್ನು ಪ್ರಾರಂಭಿಸಿದರು, ಕಾರ್ಯಕ್ರಮದಲ್ಲಿ ಭಾಗವಹಿಸಲು ಹೆಲಿಕಾಪ್ಟರ್‌ನಲ್ಲಿ ಬಡ್ತುಮಾಗೆ ಪ್ರಯಾಣಿಸಿದರು. ಧಾನದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮತ್ತು ವಿವಿಧ ರಸ್ತೆ ಯೋಜನೆಗಳ ಶಂಕುಸ್ಥಾಪನೆ ಜತೆಗೆ ಬಿನಾ-ಕೋಟಾ ರೈಲು ಮಾರ್ಗದ ದ್ವಿಗುಣಗೊಳಿಸುವ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.
ವರ್ಷಾಂತ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಬಿಜೆಪಿ ಆಡಳಿತವಿರುವ ರಾಜ್ಯಕ್ಕೆ ಕೇವಲ ಒಂದು ತಿಂಗಳ ಅವಧಿಯಲ್ಲಿ ಪ್ರಧಾನಿಯವರ ಎರಡನೇ ಭೇಟಿ ಇದಾಗಿದೆ.