ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇ-ರುಪೀ ಎಂಬ ಇ-ವೋಚರ್ ಆಧಾರಿತ ಡಿಜಿಟಲ್ ಪಾವತಿ ಸೊಲ್ಯೂಶನ್ ಗೆ ಸೋಮವಾರ(ಆಗಸ್ಟ್ 02) ವಿಡಿಯೋ ಕಾನ್ಫರೆನ್ಸ್ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಿದ್ದಾರೆ.
ಇ-ರುಪೀ ಡಿಜಿಟಲ್ ಆಡಳಿತಕ್ಕೆ ಹೊಸ ಆಯಾವನ್ನು ನೀಡಿದೆ. ಅಷ್ಟೇ ಅಲ್ಲ ಇ-ರುಪೀ ಡಿಬಿಟಿಯನ್ನು ಬಲಪಡಿಸುವಲ್ಲಿ ಮಹತ್ತರವಾದ ಪಾತ್ರ ವಹಿಸಲಿದೆ ಎಂದು ಪ್ರಧಾನಿ ಮೋದಿ ಇ-ರುಪೀ ಡಿಜಿಟಲ್ ಪಾವತಿ ಸೊಲ್ಯೂಶನ್ ಗೆ ಚಾಲನೆ ನೀಡಿ ಮಾತನಾಡಿದರು.
ಏನಿದು ಇ-ರುಪೀ:
ಇ-ರುಪೀ ನಗದು ಸಂಪರ್ಕ ರಹಿತ ಡಿಜಿಟಲ್ ಪಾವತಿ ಫ್ಲ್ಯಾಟ್ ಫಾರಂ ಆಗಿದೆ. ಕ್ಯೂ ಆರ್ ಕೋಡ್ ಅಥವಾ ಎಸ್ಸೆಮ್ಮೆಸ್ ಮೂಲಕ ಸರಣಿ ಆಧಾರಿತ ಇ-ವೋಚರ್ ಆಗಿ ಇದು ಕಾರ್ಯನಿರ್ವಹಿಸಲಿದೆ. ತಾಯಿ ಮತ್ತು ಮಕ್ಕಳ ಕಲ್ಯಾಣ ಯೋಜನೆಗಳು, ಕ್ಷಯ ನಿರ್ಮೂಲನ ಕಾರ್ಯಕ್ರಮ, ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ, ರಸಗೊಬ್ಬರ ಸಬ್ಸಿಡಿಗಳಂತಹ ಯೋಜನೆಗಳಲ್ಲಿ ಸೌಲಭ್ಯಗಳನ್ನು ಫಲಾನುಭವಿಗಳಿಗೆ ತಲುಪಿಸಲು ಇ-ರುಪೀ ನೆರವಾಗಲಿದೆ.
ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮಾಹಿತಿಯಂತೆ, ಸುಮಾರು ಎಂಟು ಬ್ಯಾಂಕ್ ಗಳಲ್ಲಿ ಇ-ರುಪೀ ದೊರೆಯುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆ್ಯಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಎಚ್ ಡಿಎಫ್ ಸಿ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಗಳಲ್ಲಿ ಲಭ್ಯವಿದೆ ಎಂದು ತಿಳಿಸಿದೆ.