ಮಹಾರಾಷ್ಟ್ರ:ಡಿಜಿಟಲ್ ಇಂಡಿಯಾಗೆ ಹೆಚ್ಚಿನ ಒತ್ತು ನೀಡಿದ್ದೇವೆ. ನಗದು ರಹಿತ ವಹಿವಾಟಿಗೆ ಈಗ ಸೂಕ್ತ ಕಾಲ ಬಂದಿದೆ. ಡಿಜಿಟಲ್ ಇಂಡಿಯಾದಿಂದ ಬಡವರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮಹಾರಾಷ್ಟ್ರದ ನಾಗ್ಪುರದಲ್ಲಿ ಶುಕ್ರವಾರ ಡಿಜಿ ಧನ್ ಜನ್ ಮೇಳಕ್ಕೆ ಚಾಲನೆ ನೀಡಿದ ಅವರು ಅಂಬೇಡ್ಕರ್ ಅವರ 126ನೇ ಜನ್ಮ ಜಯಂತಿ ಹಿನ್ನೆಲೆಯಲ್ಲಿ ಭೀಮ್ ಆಧಾರ್ ಪೇ ಆಪ್ ಬಿಡುಗಡೆ ಮಾಡಿ ಮಾತನಾಡಿದರು.
ಅಂಬೇಡ್ಕರ್ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಅಂಬೇಡ್ಕರ್ ಅವರು ಈಶ್ವರ ಇದ್ದಂತೆ, ತಾನು ವಿಷ ಕುಡಿದು ಬೇರೆಯವರಿಗೆ ಅಮೃತ ನೀಡಿದ ಮಹಾನ್ ವ್ಯಕ್ತಿ. ದೇಶದಲ್ಲಿ ಅಸ್ಪ್ರಶ್ಯತೆ ಹೋಗಲಾಡಿಸಿದ ವ್ಯಕ್ತಿ ಅವರು ಎಂದು ಹೇಳಿದರು.
ಭೀಮ್ ಆಪ್ ಬಡವರು ಸೇರಿದಂತೆ ಪ್ರತಿಯೊಬ್ಬರಿಗೂ ಹೆಚ್ಚಿನ ಅನುಕೂಲ ಒದಗಿಸಲಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ನಿಮ್ಮ ಮೊಬೈಲ್ ಫೋನ್ ನಿಮ್ಮ ಎಟಿಎಂ ಆಗಲಿದೆ ಎಂದು ತಿಳಿಸಿದರು.
ಭೀಮ್ ಆಪ್ ನ ಯಶಸ್ಸಿನ ಬಗ್ಗೆ ಇಡೀ ಜಗತ್ತೇ ಅಧ್ಯಯನ ನಡೆಸಲಿದೆ. ಈ ಡಿಜಿಧನ್ ಯೋಜನೆ ಸ್ವಚ್ಛತೆಯ ಅಭಿಯಾನವಾಗಿದೆ. ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೂ ಇದು ದಾರಿಯಾಗಲಿದೆ ಎಂದು ಹೇಳಿದರು.