ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಫಾರಿ ನಡೆಸಿದರು.
ಮೇಲುಕಾಮನಹಳ್ಳಿಯ ಹೆಲಿಪ್ಯಾಡ್‌ನಿಂದ ಕಾರಿನಲ್ಲಿ ಬಂಡೀಪುರ ಹಳೆಯ ಸ್ವಾಗತ ಕೇಂದ್ರಕ್ಕೆ ಆಗಮಿಸಿದರು. ಹುಲಿ ಯೋಜನೆಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಹಾಕಲಾಗಿರುವ ವಿಶೇಷ ಫಲಕವನ್ನು ವೀಕ್ಷಿಸಿದರು. ಅಲ್ಲೇ ಇದ್ದ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ನಮಿಸಿದರು.
ಬಳಿಕ ಸಫಾರಿಗೆ ಸಿದ್ದವಾಗಿದ್ದ ತೆರೆದ ಜೀಪನ್ನೇರಿ, ಸಫಾರಿಗೆ ತೆರಳಿದರು. ಸುಮಾರು 12 ಕಿಮೀ ದೂರ ಸಫಾರಿ ನಡೆಸಿದರು.
ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಅತ್ಯಂತ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಬಂಡೀಪುರದಿಂದ ಊಟಿಗೆ ಹೋಗುವ ತೆರಳುವ ಎಲ್ಲ ವಾಹನಗಳ ಸಂಚಾರವನ್ನೂ ನಿರ್ಬಂಧಿಸಲಾಗಿತ್ತು. ಬಂಡೀಪುರಕ್ಕೆ ಪ್ರವಾಸಿಗಳ ಪ್ರವೇಶವನ್ನು ನಾಲ್ಕು ದಿನಗಳ ಹಿಂದೆಯೇ ನಿಷೇಧಿಸಲಾಗಿತ್ತು.