ಹೊಸದಿಲ್ಲಿ: ದೇಶದ ಆರ್ಥಿಕತೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ನೀತಿ ಆಯೋಗ ಹಮ್ಮಿಕೊಂಡಿದ್ದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದು, 40ಕ್ಕೂ ಹೆಚ್ಚು ಆರ್ಥಿಕ ತಜ್ಞರು ಹಾಗೂ ಪರಿಣತರೊಂದಿಗೆ ಶನಿವಾರ ಮಾತುಕತೆ ನಡೆಸಿದ್ದಾರೆ. ಪರಿಣತರನ್ನು ವಿವಿಧ ವಿಷಯಗಳ ಅಡಿಯಲ್ಲಿ ಐದು ಸಮೂಹಗಳನ್ನು ಮಾಡಲಾಗಿತ್ತು. ಸೂಕ್ಷ್ಮ ಆರ್ಥಿಕತೆ ಮತ್ತು ಉದ್ಯೋಗ, ಕೃಷಿ ಮತ್ತು ಜಲ ಸಂಪನ್ಮೂಲ, ರಫ್ತು, ಶಿಕ್ಷಣ ಮತ್ತು ಆರೋಗ್ಯ ವಿಭಾಗದ ಪರಿಣತರನ್ನು ಈ ಸಭೆಗೆ ಆಹ್ವಾನಿಸಲಾಗಿತ್ತು.
ಬ್ಯಾಂಕಿಂಗ್ ಮತ್ತು ವಿಮಾ ಕ್ಷೇತ್ರದಲ್ಲಿ ಇನ್ನಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ, ಬಂಡವಾಳ ವಾಪಸಾತಿ ಪ್ರಕ್ರಿಯೆ ತ್ವರಿತಗೊಳಿಸುವುದು, ಜಲ ಸಂಪನ್ಮೂಲಗಳ ನಿರ್ವಹಣೆ ಸೇರಿದಂತೆ ಅನೇಕ ವಿಚಾರಗಳ ಕುರಿತು ಚರ್ಚೆ ನಡೆಯಿತು. ಬಳಿಕ ಟ್ವೀಟ್ ಮಾಡಿದ ಮೋದಿ, ‘ಆರ್ಥಿಕ ತಜ್ಞರು ಹಾಗೂ ಇತರೆ ತಜ್ಞರೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾಗಿದೆ. ದೇಶದ ಪ್ರಗತಿಯ ಪಥಕ್ಕೆ ಅನುಕೂಲಕರವಾಗುವ ಸಲಹೆಗಳನ್ನು ಸ್ವೀಕರಿಸಲಾಗಿದೆ’ ಎಂದಿದ್ದಾರೆ.
ಈ ಸಭೆಗೂ ಮುನ್ನ ನೀತಿ ಆಯೋಗವು ವಿವಿಧ ಕ್ಷೇತ್ರಗಳಲ್ಲಿನ ಸುಧಾರಣೆ ಕುರಿತ ಕಲ್ಪನೆಗಳ ಬಗ್ಗೆ ಚರ್ಚೆ ನಡೆಸಿದೆ. ಈ ಚರ್ಚೆಯಲ್ಲಿ ತೆಗೆದುಕೊಂಡ ಅಂತಿಮ ಅಭಿಪ್ರಾಯ ಹಾಗೂ ಮಾಹಿತಿಯನ್ನು ಪ್ರಧಾನಿ ಮೋದಿಗೆ ಸಲ್ಲಿಸಲಾಗಿದೆ. ಬಜೆಟ್‌ಗೂ ಮುನ್ನ ನಡೆದ ಈ ಸಭೆ ಅತ್ಯಂತ ಮಹತ್ವದ್ದಾಗಿದ್ದು, ಬಜೆಟ್‌ನಲ್ಲಿ ಈ ಚರ್ಚೆಯ ಅಂಶಗಳನ್ನು ಸೇರಿಸಿಕೊಳ್ಳುವ ಸಾಧ್ಯತೆ ಯಿದೆ. ಸಭೆಯಲ್ಲಿ ಸಚಿವರಾದ ಪಿಯೂಷ್ ಗೋಯೆಲ್, ನಿರ್ಮಲಾ ಸೀತಾರಾಮನ್ ಹಾಗೂ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಮತ್ತಿತರರು ಇದ್ದರು.
ಹಲ್ವ ತಯಾರಿಕೆ ಮೂಲಕ ಬಜೆಟ್ ಮುದ್ರಣ ಶುರು
ಮೋದಿ ಸರಕಾರದ ನೂತನ ಬಜೆಟ್ ದಾಖಲೆಗಳ ಮುದ್ರಣ ಪ್ರಕ್ರಿಯೆ ಶನಿವಾರ ಶುರುವಾಗಿದೆ. ಸಾಂಪ್ರದಾಯಿಕವಾಗಿ ಹಲ್ವ ಸಮಾರಂಭದ ಮೂಲಕ ಬಜೆಟ್ ದಾಖಲೆಗಳ ಮುದ್ರಣ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ವಿತ್ತ ಖಾತೆ ಸಹಾಯಕ ಸಚಿವ ಅನುರಾಗ್ ಠಾಕೂರ್ ಮತ್ತು ಇತರ ಹಿರಿಯ ಅಧಿಕಾರಿಗಳು ಇದ್ದರು. ಎರಡನೇ ಅವಧಿಗೆ ಅಧಿಕಾರ ಸ್ವೀಕರಿಸಿರುವ ಮೋದಿ ನೇತೃತ್ವದ ಸರಕಾರದ ಪೂರ್ಣಾವಧಿ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಜು.5ರಂದು ಮಂಡಿಸಲಿದ್ದಾರೆ.